40 ಅಲ್ಲ, 4 ಜನ ಶಾಸಕರನ್ನ ಕಾಂಗ್ರೆಸ್ ಸೆಳೆಯಲಿ ನೋಡೋಣ, ಸಾಯೋ ಪಾರ್ಟಿಗೆ ಯಾರು ಹೋಗ್ತಾರೆ?:ಈಶ್ವರಪ್ಪ

Public TV
2 Min Read

ಕಲಬುರಗಿ: ಬಿಜೆಪಿ ಎಂಎಲ್‍ಎಗಳು ಸಿಂಹ ಇದ್ದ ಹಾಗೇ, ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. 40 ಅಲ್ಲ, 4 ಜನ ಶಾಸಕರನ್ನು ಕಾಂಗ್ರೆಸ್ ಪಕ್ಷ ಸೆಳೆಯಲಿ ನೋಡೋಣ. ಸಾಯುವ ಪಕ್ಷಕ್ಕೆ ಯಾರಾದರೂ ಹೋಗ್ತಾರಾ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷ ಒಡೆದು ಹೋದರೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಪೀಸ್, ಪೀಸ್ ಆಗುತ್ತದೆ. ಕಾಂಗ್ರೆಸ್ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ. ಕಾಂಗ್ರೆಸ್ ಈ ಹಿಂದೆ ಮಾಡಿದ ಕೆಲಸಗಳ ಬಗ್ಗೆ ಪಟ್ಟಿ ಕೊಡಲಿ, ನಂತರ ನಾವು ಕೊಡುತ್ತೇವೆ. ಅನೇಕ ರಾಷ್ಟ್ರಗಳ ಮುಸ್ಲಿಂರು ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್ ಪಕ್ಷ ಮುಸ್ಲಿಂರನ್ನು ಚುನಾವಣೆಗೆ ನಿಲ್ಲಿಸಿದರೆ ಕಾಂಗ್ರೆಸ್‍ಗೆ ಭಯವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ವೀಡಿಯೋ- ಕೈ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು

ಈಶ್ವರಪ್ಪ ತಂಟೆಗೆ ನಾನು ಹೋಗುವುದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಏನು ಮಾತನಾಡುತ್ತೇನೆ ಅಂತ ಅವರಿಗೆ ಗೊತ್ತಿದೆ. ಅದಕ್ಕಾಗಿ ಅವರು ನನ್ನ ತಂಟೆಗೆ ಬರಲ್ಲ. ಇನ್ನಾದರೂ ಏಕ ವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಲಿ. ಡಿ.ಕೆ.ಶಿವಕುಮಾರ್ ಅವರನ್ನು ಯಾವ ಹುಚ್ಚ ಆಸ್ಪತ್ರೆಗೆ ಸೇರಿಸಬೇಕು. ನಲವತ್ತು ಜನ ಶಾಸಕರು ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುತ್ತಾರೆ ಅಂತ ಹೇಳುತ್ತಾರೆ. ನಾಲ್ಕು ಜನ ಶಾಸಕರು ಕೂಡಾ ಹೋಗುವುದಿಲ್ಲ. ಸಾಯುವ ಪಾರ್ಟಿಗೆ ಯಾರು ಹೋಗುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲು

ಬಹುತೇಕ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಡಿಪಾಜಿಟ್ ಕಳೆದುಕೊಳ್ಳುತ್ತಾರೆ. ಚುನಾವಣೆ ಬಂದರೆ ಕಾಂಗ್ರೆಸ್‍ನವರು ನಡುಗಿ ಹೋಗುತ್ತಾರೆ. ಬೇರೆ ಮನೆಯವರನ್ನು ಹುಡುಕಿಕೊಂಡು ಬಂದು ಟಿಕೆಟ್ ನೀಡುತ್ತಾರೆ. ಕಾಂಗ್ರೆಸ್ ನಲ್ಲಿ ಕಾರ್ಯಕರ್ತರೇ ಇಲ್ವಾ? ಎರಡು ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮ ಧೈರ್ಯಕ್ಕೆ ಅವರು ಹೆದರುತ್ತಾರೆ – ಪ್ರಿಯಾಂಕಾಗೆ ಧೈರ್ಯ ತುಂಬಿದ ಸಹೋದರ ರಾಹುಲ್

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ತುಂಬಾ ಗೌರವ ಇದೆ. ಖರ್ಗೆ ಅವರು  ಸುಮ್ಮನೆ ಏನೂ ಮಾತಾನಾಡುವುದಿಲ್ಲ. ಆದರೆ ವಿಶ್ವವೇ ಮೆಚ್ಚಿದ ನಾಯಕ ಮೋದಿ ಬಗ್ಗೆ ಚಿಲ್ಲರೆ ವ್ಯಕ್ತಿ ಅಂತಾ ಮಾತಾಡಿದ್ದಾರೆ.ವಿಶ್ವನಾಯಕನ ಬಗ್ಗೆ ಚಿಲ್ಲರೆ ಎಂದರೆ ವಿಶ್ವದ ಜನ ಏನಂತಾರೆ? ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಭದ್ರತಾ ಸದಸ್ಯತ್ವ ಸಿಕ್ಕಿದೆ. ಕೇಂದ್ರ ಸಂಪುಟದಲ್ಲಿ 27 ಜನ ದಲಿತರಿಗೆ ಸಚಿವ ಸ್ಥಾನ ಮೋದಿ ನೀಡಿದ್ದಾರೆ. ಈ ಹಿಂದಿನ ಪ್ರಧಾನಿಗಳು ವಿದೇಶಕ್ಕೆ ಹೋದಾಗ ಸಾಲ ಕೇಳಲು ಭಾರತ ಪ್ರಧಾನಿ ಬಂದಿದ್ದಾರೆ ಅಂತಿದ್ದರು. ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಮೋದಿ ಚಿನ್ನದ ಗಟ್ಟಿ. ರಾಜ್ಯದಲ್ಲಿ 27 ಸಂಸದರನ್ನು ಆಯ್ಕೆ ಮಾಡಿದ ಜನರು ಚಿಲ್ಲರೆನಾ? ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *