ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ

Public TV
2 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣವೇರ್ಪಟ್ಟಿದೆ. ಈ ಕುರಿತು ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ವಿನಯ್ ಅವರೇ ಡೈರಿ ನೀಡಿದ್ದಾರೆ ಎಂಬ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರವರ ವೈಯಕ್ತಿಕ ವಿಚಾರವಾಗಿದೆ. ಅಲ್ಲಿ ಏನೇನ್ ಆಗಿದೆ ಎಂದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಒಂದು ಆಡಿಯೋ ಕೂಡ ರಿಲೀಸ್ ಆಗಿತ್ತು. ಇದೀಗ ಡೈರಿ ಕೇಸ್ ನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

ಆ ಡೈರಿ ಎಲ್ಲಿತ್ತು ಅನ್ನೋದೇ ನನಗೆ ಗೊತ್ತಿಲ್ಲ. ಆ ಡೈರಿಗೂ ನಮಗೂ ಸಂಬಂಧವಿಲ್ಲ. ನಾನೇ ಆ ಡೈರಿಯನ್ನು ನೋಡಿಲ್ಲ. ಹೀಗಾಗಿ ನಾನು ಕೊಟ್ಟಿದ್ದೀನಿ ಎಂದು ಹೇಗೆ ಹೇಳುತ್ತಾರೆ. ಅದಕ್ಕೆ ಅರ್ಥನೂ ಇಲ್ಲ ಅಂದ್ರು.

ನನ್ನನ್ನು ಕಿಡ್ನಾಪ್ ಮಾಡಿಸಿದ್ದು ಇದೇ ಯಡಿಯೂರಪ್ಪ ಅವರ ಪಿಎ. ಅದರಲ್ಲಿ ಯಾವುದೇ ಅನುಮಾನನೇ ಇಲ್ಲ. ಅದಾದ ಬಳಿಕ ನಾನು ಕಿಡ್ನಾಪ್ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಸ್ ಇತ್ತೀಚೆಗೆ ಸಿಸಿಬಿ ಹಸ್ತಾಂತರ ಆದ ಬಳಿಕ ಎಲ್ಲ ವಿಚಾರಣೆ ಆರಂಭವಾದ ನಂತರ ಸಂತೋಷ್, ಸಿಸಿಬಿಗೆ ಹಸ್ತಾಂತರ ಮಾಡಿದುದರ ಬಗ್ಗೆ ಪ್ರಶ್ನೆ ಮಾಡಿ ಹೈ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಾಗಿ ಈ ಲೈನ್ ನಲ್ಲಿ ನಾನು ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಈ ಮಧ್ಯೆ ಯಾವುದೋ ಡೈರಿ ವಿಚಾರದ ಕುರಿತು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಅಂದ್ರು.

ಡೈರಿ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಎಲ್ಲಿ ಬೇಕಾದ್ರೂ ಪ್ರಮಾಣ ಮಾಡಲು ರೆಡಿಯಾಗಿದ್ದೇನೆ. ನಾನು ಇಂದಿನವರೆಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯೇ ಮಾಡಿಲ್ಲ. ನನ್ನನ್ನು ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೇ ಸಂತೋಷ್. ಆತ ಯಾಕೆ ಮಾಡಿದ ಅನ್ನೋದಕ್ಕೆ ಅವನೇ ಬಾಯಿ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ರು.

ಇದೇ ವೇಳೆ ಅವರು ಕಾಂಗ್ರೆಸ್ ನವರು ಬಿಡುಗಡೆ ಮಾಡಿರುವ ಡೈರಿಯ ಮೂಲ(ಒರಿಜಿನಲ್) ಕಾಪಿ ಎಲ್ಲಿದೆ ಎಂದು ಪ್ರಶ್ನಿಸಿದ್ರು. ಐಟಿ ದಾಳಿಯಾದ ಸಂದರ್ಭದಲ್ಲಿ ಅವರ ಮನೆಯಿಂದ ವಶಪಡಿಸಿಕೊಂಡಿರುವ ಎಲ್ಲದಕ್ಕೂ ಒಂದು ನೋಟ್ ಮಾಡಿ ದಾಖಲಾತಿಗಳನ್ನು ಎಂಟ್ರಿ ಮಾಡುತ್ತಾರೆ. ಅಲ್ಲದೆ ಆ ದಾಖಲಾತಿಗೆ ಇವರ ಬಳಿ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಆ ಮಹರು ಪಟ್ಟಿಯಲ್ಲಿ ಡೈರಿ ವಿಚಾರ ಇರಬೇಕಲ್ವ ಎಂದು ವಿನಯ್ ಹೇಳಿದ್ರು.

ಇಂದು ಯಡಿಯೂರಪ್ಪ ಅವರಿಗೆ ಈ ಪರಿಸ್ಥಿತಿ ಬರಲು ಅವರು ಪಕ್ಕದಲ್ಲಿ ಇಟ್ಟುಕೊಂಡ ಶನಿಯೇ ಕಾರಣ. ಆ ಶನಿ ಪ್ರಭಾವ ಬಿಎಸ್‍ವೈ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇನ್ನಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ರು.

ಬಿಎಸ್‍ವೈ ಆಪ್ತ ಸಂತೋಷ್ ಹಾಗೂ ಈಶ್ವರಪ್ಪ ಆಪ್ತ ವಿನಯ್ ಒಡನಾಟ ಚೆನ್ನಾಗಿಯೇ ಇತ್ತು. ಆ ಸಂದರ್ಭದಲ್ಲಿ ಡೈರಿ ವಿನಯ್ ಬಳಿ ಇತ್ತು. ಹೀಗಾಗಿ ಆ ಡೈರಿ ಪಡೆದುಕೊಳ್ಳಲು ಸಂತೋಷ್ ವಿನಯ್ ನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲ ಬಿಜೆಪಿ ನಾಯಕರು ಸಹ ವಿನಯ್ ಸಂಪರ್ಕ ಮಾಡಿ ಡೈರಿ ಕೊಟ್ಬಿಡು ಎಂದಿದ್ದರು. ಡೈರಿಯನ್ನ ಬಿಎಸ್ ವೈ ಆಪ್ತರೇ ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದಾರೆ ಎಂದು ಈಶ್ವರಪ್ಪ ಆಪ್ತ ವಿನಯ್ ಹೊಸ ಬಾಂಬ್ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *