ವೀರಶೈವ-ಲಿಂಗಾಯತ ಎರಡೂ ಒಂದೇ, ಪ್ರತ್ಯೇಕ ಧರ್ಮ ಕೊಡಬೇಕು: ಈಶ್ವರ್‌ ಖಂಡ್ರೆ

Public TV
2 Min Read

ಬೆಂಗಳೂರು: ವೀರಶೈವ-ಲಿಂಗಾಯತ ಎರಡೂ ಒಂದೇ. ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ (Veerashaiva Lingayat Religion) ಕೊಡಬೇಕು ಎಂಬುದು ಮಹಾಸಭಾದ ಒಕ್ಕೊರಳ ಅಭಿಪ್ರಾಯ ಅಂತ ಸಚಿವ ಈಶ್ವರ್ ಖಂಡ್ರೆ (Eshwar Khandre) ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂಬ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಿಲುವು ಸ್ಪಷ್ಟವಾಗಿ ಹೇಳಿದ್ದೇನೆ. ಲಿಂಗಾಯತ-ವೀರಶೈವ ಎರಡೂ ಒಂದೇ. ಶಿವಕುಮಾರ ಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಎಲ್ಲಾ ಅಧ್ಯಕ್ಷರು ಇವತ್ತು ವೀರಶೈವ-ಲಿಂಗಾಯತ ಎರಡು ಸಮಾನಾರ್ಥಕ ಪದಗಳು ಇವೆ ಅಂತ ಹೇಳಿದ್ದಾರೆ. ವೀರಶೈವ-ಲಿಂಗಾಯತ ಭಿನ್ನ ಇಲ್ಲ ಎಂದಿದ್ದಾರೆ.

ಇಷ್ಟ ಲಿಂಗ ಪೂಜೆ ಮಾಡುವವರು, ಅಷ್ಟಾಚರಣ ವ್ಯವಸ್ಥೆ ಪಾಲನೆ ಮಾಡುವರು, ಗುರುಗಳು ಇದ್ದಾರೆ, ವಿರಕ್ತರು ಇದ್ದಾರೆ. ಹೀಗಾಗಿ ಎಲ್ಲರು ಒಗ್ಗಟ್ಟಾಗಿ, ಸಂಘಟಿತರಾಗಿ ಇರಬೇಕು. ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ಯಾವುದೇ ಉಪಯೋಗ ಆಗೊಲ್ಲ ಎಂಬುದು ನಮ್ಮ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮದಲ್ಲಿ (Lingayat Religion) ಮಹಾಸಭಾದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾಸಭಾ ಇವತ್ತು ಅಲ್ಲ ಸ್ವಾತಂತ್ರ‍್ಯ ಪೂರ್ವದಿಂದ ಹಿಡಿದು 2,000 ಇಸವಿಯಿಂದ ನಡೆದ ಜನಗಣತಿ ಸಮಯದಲ್ಲಿ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಾಗಿದೆ. ಭೌಗೋಳಿಕವಾಗಿ ನಾವೆಲ್ಲರೂ ಹಿಂದೂಗಳೇ ಆದರೂ ನಮ್ಮ ಆಚಾರ-ವಿಚಾರದಲ್ಲಿ ಸಿಖ್, ಜೈನರು, ಬೌದ್ಧ, ಪಾರ್ಸಿ ಗಳಿಗೆ ಪ್ರತ್ಯೇಕ ಧರ್ಮ ಅಂತ ಕೊಡಲಾಗಿದೆ. ಅದೇ ಆಧಾರದಲ್ಲಿ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡಬೇಕು ಅಂತ ಪದೇ ಪದೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜನಗಣತಿಯಲ್ಲೂ ಪ್ರತ್ಯೇಕ ಕಾಲಂ ಕೊಡಬೇಕು ಅಂತ ವಿನಂತಿ ಮಾಡಿದ್ದೇವೆ. ಇಲ್ಲಿವರೆಗೂ ಸರ್ಕಾರ ಅದನ್ನ ಗುರುತಿಸಿಲ್ಲ. ನಮ್ಮ ಮಹಾಸಭೆಯ ವತಿಯಿಂದ ಇನ್ನು ಮುಂದೆಯೂ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲು ಪ್ರಯತ್ನ ಮಾಡ್ತೀವಿ ಅಂತ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಧರ್ಮದ ವಿಚಾರ ಮತ್ತು ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಜನಸಮುದಾಯದ ನಾಯಕರು ಇದ್ದಾರೆ. ನಾವು ಯಾರಾದ್ರು ಪ್ರತ್ಯೇಕ ಧರ್ಮದ ಬಗ್ಗೆ ಅವರ ಬಳಿ ಮಾತಾಡಿದ್ರೆ ಸಿಎಂ ನಿರ್ಧಾರ ತೆಗೆದುಕೊಳ್ತಾರೆ. ಮೊದಲು ಕೂಡಾ ನೀವೆಲ್ಲರು ಬಂದು ಏನ್ ಹೇಳ್ತಿರೋ ಅದನ್ನ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ರು. ವಿನಾಃ ಕಾರಣ ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡೋದು ಸರಿಯಲ್ಲ ಅಂತ ತಿಳಿಸಿದ್ದಾರೆ.

Share This Article