ಬೆಂಗಳೂರು: ಗಾಳಿ, ಮಳೆಗ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿಹಾನಿ ಆಗುತ್ತಿದೆ. ಹೀಗಾಗಿ ಅಪಾಯಕಾರಿ ವೃಕ್ಷಗಳನ್ನು ಗುರುತಿಸಿ ಕೊಂಬೆಗಳನ್ನು ಕತ್ತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಕಂಟೋನ್ಮೆಂಟ್ ಬಳಿಯಿಂದು ರಸ್ತೆ ಬದಿಯ ಮರದ ಸುತ್ತಲೂ ಹಾಕಲಾಗಿದ್ದ ಕಾಂಕ್ರೀಟ್ ತೆರವು ಮಾಡುವ ಮೂಲಕ ವೃಕ್ಷಗಳ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ 29 ವರ್ಷದ ಅಕ್ಷಯ್ ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದರು.ಇದನ್ನೂ ಓದಿ: ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳುವಷ್ಟು ದಾರಿದ್ರ್ಯ ನನಗೆ ಬಂದಿಲ್ಲ – ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು
ಮಳೆ, ಗಾಳಿಗೆ ಟೊಳ್ಳು ಮರಗಳು ಮತ್ತು ಬೇರು ಕಚ್ಚದ ಮರಗಳು ಧರಾಶಾಯಿ ಆಗುತ್ತವೆ. ಇದಕ್ಕೆ ಕಾರಣ ಬೇರಿಗೆ ನೀರು ಇಳಿಯದಂತೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲಿನ ಚಪ್ಪಡಿ, ಟೈಲ್ಸ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ ತೀರ್ಪು ನೀಡಿದ್ದು, ಸರ್ಕಾರ ಈ ಸಂಬಂಧ ಅಧಿಕೃತ ಆದೇಶವನ್ನೇ ಹೊರಡಿಸಿದೆ. ಗುರುವಾರ ಬಿಬಿಎಂಪಿ ವಿಶೇಷ ಆಯುಕ್ತರು ಮರದ ಸುತ್ತ ಇರುವ ಕಾಂಕ್ರೀಟ್ ತೆರವಿಗೆ ಆದೇಶ ಮಾಡಿದ್ದು, ಇನ್ನು ಮುಂದೆ ರಸ್ತೆಬದಿ ಸಸಿ ನೆಡುವಾಗ ಒಂದು ಮೀಟರ್ ಸುತ್ತಳತೆಯಲ್ಲಿ ಮಣ್ಣು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳು ಮತ್ತು ಹೆದ್ದಾರಿ ಪ್ರಾಧಿಕಾರ, ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಈಗಾಗಲೇ ನೆಟ್ಟಿರುವ ಗಿಡ, ಮರಗಳ ಸುತ್ತ ಇರುವ ಕಾಂಕ್ರೀಟ್, ಡಾಂಬರು ತೆರವಿಗೆ ಕ್ರಮ ವಹಿಸಬೇಕು. ವೃಕ್ಷ ಪ್ರಾಧಿಕಾರ (ಟ್ರಿ-ಅಥಾರಿಟಿ) ಸಭೆಗಳನ್ನು ನಿಯಮಿತವಾಗಿ ನಡೆಸಿ, ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳ ರೆಂಬೆ, ಕೊಂಬೆ ತೆರವಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಒಬ್ಬ ಮನುಷ್ಯ ನೆಮ್ಮದಿಯಿಂದ ಉಸಿರಾಡಲು 7 ಮರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಇಂದು ಬೆಂಗಳೂರು ಕಾಂಕ್ರೀಟ್ ಕಾಡಾಗಿದ್ದು, ಇಲ್ಲಿ 7 ಜನರಿಗೆ 1 ಮರವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ವೃಕ್ಷ ಸಂರಕ್ಷಣೆ ಮತ್ತು ಸಂವರ್ಧನೆಗೆ ಮುಂದಾಗಬೇಕು ಎಂದರು.ಇದನ್ನೂ ಓದಿ: ಒಂದೇ ದಿನ 8 ಏರ್ ಇಂಡಿಯಾ ವಿಮಾನ ಹಾರಾಟ ರದ್ದು, 16 ಅಂತಾರಾಷ್ಟ್ರೀಯ ಮಾರ್ಗಗಳು ಬಂದ್