ಬೆಂಗಳೂರು: ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಸಂತಾಪ ಸೂಚಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆಯ ಪರಿಸರ ಪ್ರಚಾರಕರಾಗಿದ್ದರು. ಮಕ್ಕಳಿಲ್ಲದ ಈ ಮಹಾತಾಯಿ ಮರಗಳನ್ನೇ ಮಕ್ಕಳಂತೆ ಬೆಳೆಸುವ ಮೂಲಕ ಹಸಿರಿನ ಮಹತ್ವವನ್ನು ಜಗತ್ತಿಗೆ ಸಾರಿದ್ದರು. ಅನಕ್ಷರಸ್ಥರಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿ, ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದರು. ಜೊತೆಗೆ ಅವರಿಗೆ ಪದ್ಮಶ್ರೀ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳು ಲಭಿಸಿದ್ದವು ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವೃಕ್ಷಮಾತೆ ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ
ತಿಮ್ಮಕ್ಕನವರು ಎಷ್ಟು ಮುಗ್ಧರಾಗಿದ್ದರೆಂದರೆ ತಮಗೆ ಪ್ರಶಸ್ತಿ ನೀಡಿದ ರಾಷ್ಟ್ರಪತಿಗಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಅಷ್ಟೇ ಮುಗ್ಧತೆಯಿಂದ ಅವರ ಆಶೀರ್ವಾದವನ್ನು ಸ್ವೀಕರಿಸಿದ್ದರು ಎಂದು ಸ್ಮರಿಸಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾಗಿದ್ದ ತಿಮ್ಮಕ್ಕನವರು, ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಬಿಕ್ಕಲ ಚಿಕ್ಕಯ್ಯ ಅವರನ್ನು ವರಿಸಿದ ಬಳಿಕ ಹುಲಿಕಲ್‌ಗೆ ಬಂದು ನೆಲೆಸಿದರು. ಬಹುಕಾಲ ಮಕ್ಕಳಾಗದ ದಂಪತಿ ತಮ್ಮ ನೋವು ಮರೆಯಲು ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ಸಸಿ ನೆಡಲು ಪ್ರಾರಂಭಿಸಿದರು. ಇವರು ನೆಟ್ಟ 385 ಆಲದ ಮರಗಳು ಇಂದಿಗೂ ನೂರಾರು ಪಕ್ಷಿಗಳಿಗೆ ಆಶ್ರಯ ನೀಡಿದೆ. ಬಿಸಲಲ್ಲಿ ಬಳಲಿ ಬಂದವರಿಗೆ ನೆರಳಾಗಿವೆ. ಇವರಿಂದ ಪ್ರೇರಣೆ ಪಡೆದು ನೂರಾರು ಯುವಕರು ವೃಕ್ಷ ಸಂವರ್ಧನೆ ಮಾಡಿದ್ದಾರೆ. ನಮ್ಮ ಇಲಾಖೆ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ವೃಕ್ಷೋದ್ಯಾನಗಳನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.
ವೃಕ್ಷೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ಮರಗಳನ್ನು ರಕ್ಷಿಸಿದ ತಿಮ್ಮಕ್ಕನವರು ಇಂದು ವಿಶ್ವ ಮಾನ್ಯರಾಗಿದ್ದಾರೆ. ಸುದ್ದಿವಾಹಿನಿಯೊಂದು ನಡೆಸಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಸಮೀಕ್ಷೆಯಲ್ಲಿ ಸಾಲುಮರದ ತಿಮ್ಮಕ್ಕ ಸ್ಥಾನ ಪಡೆದಿದ್ದರು. ತಿಮ್ಮಕ್ಕ ಅವರ ಜೀವನ, ಸೇವೆಯ ಮೇಲೆ ಅಧ್ಯಯನ ನಡೆಸಿ, ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಸಹ ಪಡೆದಿದ್ದಾರೆ. ಅಗಲಿದ ಹಿರಿಯ ಜೀವಕ್ಕೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಚಿತ್ರದಲ್ಲಿ ಮೇಘನಾ ರಾಜ್?
