ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ

Public TV
2 Min Read

ಹಾಸನ: ಸರ್ಕಾರದ ನಿರ್ಲಕ್ಷ್ಯ, ಮೂಲ ಸೌಕರ್ಯಗಳ ಕೊರತೆ, ಪೋಷಕರ ಇಂಗ್ಲೀಷ್ ವ್ಯಾಮೋಹ, ಶಿಕ್ಷಕರ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.

ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 7 ಸಾವಿರ ಮಕ್ಕಳು ಸರ್ಕಾರಿ ಶಾಲೆಯಿಂದ ಹೊರನಡೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ 35 ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಪ್ರಸಕ್ತ ವರ್ಷವೂ ಸಹ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ 1,249 ಕಿರಿಯ ಪ್ರಾಥಮಿಕ ಶಾಲೆ, 969 ಹಿರಿಯ ಪ್ರಾಥಮಿಕ ಶಾಲೆ, 241 ಪ್ರೌಢ ಶಾಲೆ ಸೇರಿ 2,249 ಸರ್ಕಾರಿ ಶಾಲೆಗಳಿವೆ. ಇವುಗಳಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿದ್ದರೆ, 681 ಶಾಲೆಯಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನೂ ಓದಿ: 2002ರ ಗುಜರಾತ್‌ ಗಲಭೆಯೇ ದೇಶದ ಅತಿದೊಡ್ಡ ಗಲಭೆಯಲ್ಲ – ರೈಲು ದುರಂತ ಸ್ಮರಿಸಿದ ಮೋದಿ

2023-24ನೇ ಸಾಲಿನಲ್ಲಿ ಜಿಲ್ಲಾದ್ಯಂತ 86,231 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. 2024-25ನೇ ಸಾಲಿಗೆ ಮಕ್ಕಳ ಸಂಖ್ಯೆ 79,283ಕ್ಕೆ ಇಳಿಕೆ ಕಂಡಿದ್ದು, ಒಂದು ವರ್ಷದಲ್ಲಿ 6,948 ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆ 150ಕ್ಕೂ ಹೆಚ್ಚಿದೆ. ಒಂದರಿಂದ 7ನೇ ತರಗತಿಯವರೆಗೆ ಒಬ್ಬ ಶಿಕ್ಷಕ ಅಥವಾ ಓರ್ವ ಶಿಕ್ಷಕಿ ಪಾಠ ಮಾಡುತ್ತಿದ್ದಾರೆ. ಇದರಿಂದಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಹತ್ತಾರು ಯೋಜನೆ ರೂಪಿಸುತ್ತಿದೆ. ಆದರೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಸುಧಾರಣೆಯಾಗದೆ ಜ್ಞಾನ ದೇಗುಲಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ

ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಪಟ್ಟಿ ಸಿದ್ಧಪಡಿಸಿಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಇದರ‌ ಜೊತೆಗೆ ಅವಶ್ಯವಿರುವ ಕಡೆ ಅಕ್ಕಪಕ್ಕದ ಶಾಲೆಗಳ ಸಂಯೋಜನೆಗೆ ಕ್ರಮ ಕೈಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯಾಗದ ಹಿನ್ನಲೆಯಲ್ಲಿ ಪೋಷಕರು ಕಷ್ಟವಾದರೂ ಸರಿ ಖಾಸಗಿ ಶಾಲೆಯೇ ಉತ್ತಮ ಎನ್ನುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಪಾಠ ಬೋಧನೆ ಮಾತ್ರವಲ್ಲದೇ ಸರ್ಕಾರ ಅವರಿಗೆ ಸಂಬಂಧವಿಲ್ಲದ ಹೆಚ್ಚುವರಿ ಕೆಲಸಗಳನ್ನು ವಹಿಸುವುದರಿಂದ ಪಠ್ಯ ಬೋಧನೆಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕಾಟಾಚಾರಕ್ಕೆ ಎಂಬಂತೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಆದ್ದರಿಂದ ಪೋಷಕರು ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು: ಅಮಿತ್‌ ಶಾ

Share This Article