ವಿಶ್ವಕಪ್ ಗೆದ್ದ 10 ದಿನಗಳ ಬೆನ್ನಲ್ಲೇ 85 ರನ್‍ಗಳಿಗೆ ಇಂಗ್ಲೆಂಡ್ ಆಲೌಟ್

Public TV
2 Min Read

– ವಿಶ್ವಕಪ್ ವಿಜೇತರಿಗೆ ಶಾಕ್ ಕೊಟ್ಟ ಐರ್ಲೆಂಡ್

ಲಾರ್ಡ್ಸ್: 2019 ಏಕದಿನ ವಿಶ್ವಕಪ್ ವಿಜೇತವಾಗಿ ಹೊರಹೊಮ್ಮಿದ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೇವಲ 85 ರನ್ ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಎದುರಾಳಿ ತಂಡದ ಟೀಮ್ ಮುರ್ತಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಕೇವಲ 23.4 ಓವರ್ ಗಳಲ್ಲಿ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 85 ರನ್ ಗಳಿಗೆ ಆಲೌಟ್ ಆಯ್ತು. ಇನ್ನಿಂಗ್ಸ್ ನಲ್ಲಿ ಟೀಮ್ ಮುರ್ತಾ 5 ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು.

ಇಂಗ್ಲೆಂಡ್ ತಂಡದ ಪರ ಜೋ ಡೆನ್ಲಿ 23 ರನ್, ಸ್ಯಾಮ್ ಕರ್ರನ್ 18 ರನ್, ಸ್ಟೋನ್ 19 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ತಂಡದ ನಾಯಕ ಜೋ ರೂಟ್ 2 ರನ್ ಗಳಿಸಿ ಔಟಾದರೆ, ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಜೇಸನ್ ರಾಯ್ 5 ರನ್ ಗಳಿಸಿದರು. ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿ ಬ್ಯಾಟಿಂಗ್ ಆರಂಭಿಸಿರುವ ಐರ್ಲೆಂಡ್ ತಂಡ 32 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಆಯ್ದುಕೊಂಡಿದೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿಗೆ ಪಂದ್ಯದ ಆರಂಭದ ದಿನದ ಭೋಜನ ವಿರಾಮದ ಅವಧಿಗೂ ಮುನ್ನವೇ ಆಲೌಟ್ ಆಗಿದೆ. 1997ರ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಬಳಿಕ ತವರು ನೆಲದಲ್ಲಿ ಗಳಿಸಿದ ಅತಿ ಕನಿಷ್ಠ ಮೊತ್ತ ಇದಾಗಿದೆ. ಅಂದಹಾಗೇ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ವೊಂದರಲ್ಲಿ ಇಂಗ್ಲೆಂಡ್ ತಂಡ ಗಳಿಸಿದ ಕನಿಷ್ಠ ಮೊತ್ತ 45 ರನ್ ಆಗಿದ್ದು, 1887ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್ ನಲ್ಲಿ 45 ರನ್‍ಗಳಿಗೆ ಆಲೌಟಾಗಿತ್ತು.

ಏಕದಿನ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಐರ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‍ನಲ್ಲಿ ದೊರೆತ ಅವಕಾಶದಲ್ಲಿ ಉತ್ತಮ ಸಾಧನೆ ಮಾಡಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ್ ಟೆಸ್ಟ್ ಪಂದ್ಯದ ಸರಣಿ ಇದಾಗಿದ್ದು, ಕಳೆದ ವರ್ಷವಷ್ಟೇ ಟೆಸ್ಟ್ ಗೆ ಐರ್ಲೆಂಡ್ ಪಾದಾರ್ಪಣೆ ಮಾಡಿದ್ದು, 2 ಪಂದ್ಯಗಳನ್ನಷ್ಟೇ ಆಡಿದೆ.

Share This Article
Leave a Comment

Leave a Reply

Your email address will not be published. Required fields are marked *