ಗಿಲ್‌ ದ್ವಿಶತಕಕ್ಕೆ ದಾಖಲೆಗಳು ಛಿದ್ರ – 510 ರನ್‌ ಹಿನ್ನಡೆಯಲ್ಲಿ ಇಂಗ್ಲೆಂಡ್‌

Public TV
3 Min Read

ಎಜ್ಬಾಸ್ಟನ್‌: ನಾಯಕ ಶುಭಮನ್‌ ಗಿಲ್‌ (Shubman Gill) ಅವರ ದಾಖಲೆಯ ದ್ವಿಶತಕದ ನೆರವಿನಿಂದ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯ ಎರಡನೇ ದಿನ ಭಾರತ (Team India) ಮೇಲುಗೈ ಸಾಧಿಸಿದೆ. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 77 ರನ್‌ ಗಳಿಸಿದ್ದು 510 ರನ್‌ಗಳ ಹಿನ್ನಡೆಯಲ್ಲಿದೆ.

ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ ಬೆನ್ ಡಕೆಟ್‌ ಮತ್ತು ಓಲಿ ಪೋಪ್ ಶೂನ್ಯಕ್ಕೆ ಔಟಾದರು. ಆಕಾಶ್‌ ದೀಪ್‌ ಅವರು ಸತತ ಎರಡು ಎಸೆತಗಳಲ್ಲಿ ಇಬ್ಬರನ್ನು ಔಟ್‌ ಮಾಡಿದರು.

19 ರನ್‌ ಗಳಿಸಿದ್ದ ಜ್ಯಾಕ್ ಕ್ರಾಲಿ ಔಟಾದಾಗ ಇಂಗ್ಲೆಂಡ್‌ 3 ವಿಕೆಟ್‌ ನಷ್ಟಕ್ಕೆ 25 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಜೊತೆಯಾದ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಮುರಿಯದ 4ನೇ ವಿಕೆಟಿಗೆ 81 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿ ತಂಡವನ್ನು ಮೇಲಕ್ಕೆ ಎತ್ತಿದರು. ಜೋ ರೂಟ್‌ ಔಟಾಗದೇ 18 ರನ್‌, ಹ್ಯಾರಿ ಬ್ರೂಕ್‌ ಔಟಾಗದೇ 30 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಭಾರತ ಇಂದು ನಿನ್ನೆಯ ಮೊತ್ತಕ್ಕೆ 277 ರನ್‌ ಸೇರಿಸಿ ಅಂತಿಮವಾಗಿ 151 ಓವರ್‌ಗಳಲ್ಲಿ  587 ರನ್‌ಗಳಿಗೆ ಸರ್ವಪತನ ಕಂಡಿತು. 114 ರನ್‌ ಗಳಿಸಿದ್ದ ಶುಭಮನ್‌ ಗಿಲ್‌ ಇಂದು 269 ರನ್‌(387 ಎಸೆತ, 30 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರೆ 41 ರನ್‌ ಗಳಿಸಿದ್ದ ರವೀಂದ್ರ ಜಡೇಜಾ 89 ರನ್‌(137 ಎಸೆತ, 10 ಬೌಂಡರಿ, 1 ಸಿಕ್ಸ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇವರಿಬ್ಬರು 6ನೇ ವಿಕೆಟಿಗೆ 279 ಎಸೆತಗಳಲ್ಲಿ 203 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 400 ರನ್‌ಗಳ ಗಡಿ ದಾಟಿಸಿದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಗಿಲ್‌ ಚೊಚ್ಚಲ ದ್ವಿಶತಕ ಗವಾಸ್ಕರ್‌, ಕೊಹ್ಲಿ ಸೇರಿ ಹಲವು ದಿಗ್ಗಜರ ದಾಖಲೆ ಪುಡಿ ಪುಡಿ

ನಂತರ ವಾಷಿಂಗ್ಟನ್‌ ಸುಂದರ್‌ 42 ರನ್‌(103 ಎಸೆತ, 3 ಬೌಂಡರಿ, 1 ಸಿಕ್ಸ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು. ಗಿಲ್‌ ಮತ್ತು ಸುಂದರ್‌ 189 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದರು. ಅಂತಿಮವಾಗಿ ಗಿಲ್‌ ತಂಡದ ಮೊತ್ತ 574 ರನ್‌ ಗಳಿಸಿದ್ದಾಗ 8ನೇಯವರಾಗಿ ವಿಕೆಟ್‌ ಒಪ್ಪಿಸಿದರು. ಇಂಗ್ಲೆಂಡ್‌ ಪರ ಶೋಯೆಬ್‌ ಬಷೀರ್‌ 3 ವಿಕೆಟ್‌ ಕಿತ್ತರೆ ಕ್ರಿಸ್‌ ವೋಕ್ಸ್‌ ಮತ್ತು ಜೋಶ್‌ ಟಂಗ್‌ ತಲಾ 2 ವಿಕೆಟ್‌ ಕಿತ್ತರು.

ಗಿಲ್‌ ದಾಖಲೆಗಳು
ಶುಭಮನ್ ಗಿಲ್ ಗಳಿಸಿದ 269 ರನ್‌ ಭಾರತೀಯ ನಾಯಕನೊಬ್ಬ ಟೆಸ್ಟ್‌ನಲ್ಲಿ ಗಳಿಸಿದ ಅತ್ಯಧಿಕ ರನ್‌ ಆಗಿದೆ. 2019 ರಲ್ಲಿ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ ಅಜೇಯ 254 ರನ್‌ ಇಲ್ಲಿಯವರೆಗೆ ನಾಯಕನೊಬ್ಬ ಅತ್ಯದಿಕ ರನ್‌ ಆಗಿತ್ತು.

ಏಷ್ಯಾದ ಹೊರಗೆ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ರನ್‌ಗಳಾಗಿವೆ. ಈ ಹಿಂದೆ 2004 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್‌ ತೆಂಡೂಲ್ಕರ್‌ ಅಜೇಯ 241 ರನ್‌ ಹೊಡೆದಿದ್ದರು.

ಇಂಗ್ಲೆಂಡ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ಟೆಸ್ಟ್ ಸ್ಕೋರ್.

2004 ರಲ್ಲಿ ಪಾಕಿಸ್ತಾನ ಪ್ರವಾಸದಲ್ಲಿ ವೀರೇಂದ್ರ ಸೆಹ್ವಾಗ್ ಅವರ 309 ಮತ್ತು ರಾವಲ್ಪಿಂಡಿಯಲ್ಲಿ ರಾಹುಲ್ ದ್ರಾವಿಡ್ ಅವರ 270 ರನ್‌ಗಳ ನಂತರ ವಿದೇಶಿ ನೆಲದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತ್ಯಧಿಕ ಸ್ಕೋರ್ ಆಗಿದೆ.

ಗಿಲ್ ಅವರ 269 ರನ್‌ ಟೆಸ್ಟ್‌ನಲ್ಲಿ ಭಾರತದ ಏಳನೇ ಅತ್ಯಧಿಕ ಸ್ಕೋರ್ ಆಗಿದೆ.

Share This Article