ಡಿಕ್ಲೇರ್‌ ವೇಳೆ ಎಡವಟ್ಟು – ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಗಿಲ್‌?

Public TV
2 Min Read

ಮುಂಬೈ: ಇಂಗ್ಲೆಂಡ್‌ (England) ವಿರುದ್ದದ ಎರಡನೇ ಟೆಸ್ಟ್‌ ಕ್ರಿಕೆಟಿನಲ್ಲಿ ದ್ವಿಶತಕ, ಶತಕ ಸಿಡಿಸಿ ಉತ್ತಮ ಲಯದಲ್ಲಿರುವ ನಾಯಕ ಶುಭಮನ್‌ ಗಿಲ್‌ (Shubman Gill) ಡಿಕ್ಲೇರ್‌ ಮಾಡುವ ಸಂದರ್ಭದಲ್ಲಿ ಎಡವಟ್ಟು ಮಾಡಿದ್ದಕ್ಕೆ ಬಿಸಿಸಿಐ (BCCI) ಕ್ಲಾಸ್‌ ಮಾಡುವ ಸಾಧ್ಯತೆಯಿದೆ.

ಹೌದು. ಎರಡನೇ ಇನಿಂಗ್ಸ್‌ನಲ್ಲಿ ಭಾರತ 6 ವಿಕೆಟ್‌ ನಷ್ಟಕ್ಕೆ 427 ರನ್‌ ಗಳಿಸಿದ್ದಾಗ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಡಿಕ್ಲೇರ್‌ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸುವಾಗ ಗಿಲ್‌ ಕಪ್ಪು ಬಣ್ಣದ ನೈಕ್‌ (Nike) ಟೀಶರ್ಟ್‌ ಧರಿಸಿದ್ದರು.

ಅಡೀಡಸ್‌ ಕಂಪನಿ ಟೀಂ ಇಂಡಿಯಾದ ಜೆರ್ಜಿ ಪ್ರಾಯೋಜಕತ್ವವನ್ನು ಪಡೆದುಕೊಂಡಿದ್ದು ಪಂದ್ಯ ನಡೆಯುವಾಗ ಆಟಗಾರರು ಕಡ್ಡಾಯವಾಗಿ ಅಡೀಡಸ್‌ (Adidas) ಕಂಪನಿಯ ಧಿರಿಸುಗಳನ್ನು ಧರಿಸಬೇಕಾಗುತ್ತದೆ. ಆದರೆ ನಾಯಕನಾಗಿರುವ ಗಿಲ್‌ ಈ ನಿಯಮವನ್ನು ಉಲ್ಲಂಘಿಸಿದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ತೂಫಾನ್‌ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ

2023 ರಲ್ಲಿ ಬಿಸಿಸಿಐ ಜೊತೆ ಅಡೀಡಸ್‌ 253 ಕೋಟಿ ರೂ. ಡೀಲ್‌ಗೆ ಸಹಿ ಹಾಕಿತ್ತು. ಈ ಒಪ್ಪಂದದ ಅನ್ವಯ 5 ವರ್ಷಗಳ ಕಾಲ ಅಡಿಡಾಸ್‌ ಕಂಪನಿ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಿಸಲಿದೆ. ಭಾರತದ ಪುರುಷರು, ಮಹಿಳೆಯರು ಮತ್ತು U-19 ತಂಡಗಳಿಗೆ ಜೆರ್ಸಿ, ಕಿಟ್‌ಗಳು ಮತ್ತು ಇತರ ಸರಕುಗಳನ್ನು ಅಡೀಡಸ್‌ ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಬಿಸಿಸಿಐ-ಅಡೀಡಸ್ ಪಾಲುದಾರಿಕೆಯು ಪ್ರಾಯೋಜಕತ್ವ ಶುಲ್ಕ, ಸರಕುಗಳ ಮಾರಾಟದಿಂದ ಬರುವ ರಾಯಧನ ಮತ್ತು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಕಿಟ್‌ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ.

ಒಪ್ಪಂದದ ಪ್ರಕಾರ, ಅಡೀಡಸ್‌ ಪ್ರತಿ ಪಂದ್ಯಕ್ಕೆ 75 ಲಕ್ಷ ರೂ. ಪಾವತಿಸಲಿದೆ. ಸೆಪ್ಟೆಂಬರ್ 2020 ರವರೆಗೆ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದ್ದ ನೈಕ್, ಪ್ರತಿ ಪಂದ್ಯಕ್ಕೆ 88 ಲಕ್ಷ ರೂ. ಬಿಸಿಸಿಐಗೆ ಪಾವತಿಸುತ್ತಿತ್ತು. ಮುಂದಿನ ಐದು ವರ್ಷಗಳ ಅಡೀಡಸ್‌ ಮಾರಾಟ ಮಾಡುವ ಸರಕುಗಳ ಮೇಲೆ ಬಿಸಿಸಿಐ ವರ್ಷಕ್ಕೆ 10 ಕೋಟಿ ರೂ. ರಾಯಧನವನ್ನು ಪಡೆಯಲಿದೆ.

Share This Article