ಲಾರ್ಡ್ಸ್: ಐತಿಹಾಸಿಕ ಲಾರ್ಡ್ಸ್ (Lords) ಅಂಗಳದಲ್ಲಿ ಆಂಗ್ಲರ ವಿರುದ್ಧ ನಡೆಸಿದ ರವೀಂದ್ರ ಜಡೇಜಾ (Ravindra Jadeja) ಹೋರಾಟ ವ್ಯರ್ಥವಾಗಿದೆ. ರೋಚಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವು ಭಾರತದ ವಿರುದ್ಧ 22 ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ONE OF THE MOST HEARTBREAKING DEFEATS FOR INDIA. 💔 pic.twitter.com/0MF39tEHiD
— Mufaddal Vohra (@mufaddal_vohra) July 14, 2025
ಲಾರ್ಡ್ಸ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ 193 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 4ನೇ ದಿನದ ಅಂತ್ಯಕ್ಕೆ 58 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಕೊನೆಯ ದಿನದಾಟದಲ್ಲಿ ಭಾರತದ ಗೆಲುವಿಗೆ 135 ರನ್ ಬೇಕಿತ್ತು. ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಯುವಪಡೆಗೆ ಇಂಗ್ಲೆಂಡ್ (England) ಬೌಲರ್‌ಗಳು ಮರ್ಮಾಘಾತ ನೀಡಿದರು. ಅಗ್ರ ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ ರವೀಂದ್ರ ಜಡೇಜಾ ಅಜೇಯ ಹೋರಾಟದ ಹೊರತಾಗಿಯೂ ಭಾರತ 170 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ 22 ರನ್‌ಗಳ ಗೆಲುವು ಸಾಧಿಸಿತು.
ಟರ್ನಿಂಗ್ ಸಿಕ್ಕಿದ್ದೆಲ್ಲಿ?
ಉತ್ತಮ ಪ್ರದರ್ಶನ ನೀಡುವ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ರಿಷಭ್ ಪಂತ್ 12 ಎಸೆತಗಳಲ್ಲಿ 9ರನ್ ಗಳಿಸಿದ್ದಾಗ ಜೋಫ್ರಾ ಆರ್ಚರ್‌ಗೆ ಕ್ಲೀನ್ ಬೌಲ್ಡ್ ಆದರು. ಈ ಬೆನ್ನಲ್ಲೇ ಕೆ.ಎಲ್ ರಾಹುಲ್ ಕೂಡ 58 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರು. ಅಷ್ಟೇ ಅಲ್ಲ, ಮೊದಲ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ನಲ್ಲಿ ಭದ್ರವಾಗಿ ನಿಂತಿದ್ದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೇವಲ 4 ಎಸೆಗಳಲ್ಲಿ ಡಕ್‌ಔಟ್ ಆಗಿ ಪೆವಿಲಿಯನ್‌ಗೆ ಮರಳಿದ್ರು. ಇಲ್ಲಿಂದ ಪಂದ್ಯದ ಗತಿಯೇ ಬದಲಾಯಿತು.
ಒಂದಂಥದಲ್ಲಿ 82 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ 100 ರನ್ ಗಳಿಸುವುದೂ ಕಷ್ಟವೆಂದೇ ಭಾವಿಸಲಾಗಿತ್ತು. ಆದ್ರೆ ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ ಅವರ ಸಣ್ಣ ಜೊತೆಯಾಟ ಟೀಂ ಇಂಡಿಯಾ ಗೆಲುವಿನ ಭರವಸೆ ಮೂಡಿಸಿತ್ತು. ಹೀಗೆನ್ನುತ್ತಿರುವಾಗಲೇ 53 ಎಸೆತಗಳಲ್ಲಿ 13 ರನ್ ಗಳಿಸಿದ್ದ ನಿತೀಶ್ ರೆಡ್ಡಿ ಔಟಾದರು. ಬಳಿಕ ಕಣಕ್ಕಿಳಿದ ಬುಮ್ರಾ 5 ರನ್ ಗಳಿಸಿದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಜಡೇಜಾಗೆ ಉತ್ತಮ ಸಾಥ್ ನೀಡಿದ್ದರು. ಈ ವೇಳೆ ಜಡೇಜಾ ಉತ್ತಮ ಬ್ಯಾಟಿಂಗ್ ಕೂಡ ನಡೆಸುತ್ತಿದ್ದರು. ಆದ್ರೆ 54 ಎಸೆತಗಳನ್ನು ಎದುರಿಸಿದ ಬುಮ್ರಾ ಬೆನ್‌ಸ್ಟೋಕ್ಸ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಸಿರಾಜ್ (4 ರನ್) ಕೂಡ ಜಡ್ಡುಗೆ ಉತ್ತಮ ಸಾಥ್ ನೀಡಿದ್ದರು. ಆದ್ರೆ ಶೋಯೆಬ್ ಬಶೀರ್ ಅವರ ಒಂದು ಎಸೆತವು ಬ್ಯಾಟ್‌ಗೆ ತಗುಲಿದ ಬಳಿಕ ಸ್ವಿಂಗ್ ಆಗಿ ವಿಕೆಟ್‌ಗೆ ತಗುಲಿತು ಈ ವೇಳೆ ಸಿರಾಜ್ ಚೆಂಡನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಜಡ್ಡು ಹೋರಾಟವೂ ವ್ಯರ್ಥವಾಯಿತು.
ಕೊನೆಯವರೆಗೂ ಹೋರಾಡಿದ ಜಡೇಜಾ 181 ಎಸೆತಗಳಲ್ಲಿ 61 ರನ್ (ಸಿಕ್ಸ್, 4 ಬೌಂಡರಿ) ಗಳಿಸಿದ್ರೆ, ಕೆ.ಎಲ್ ರಾಹುಲ್ 39 ರನ್, ಕರುಣ್ ನಾಯರ್ 14 ರನ್, ಶುಭಮನ್ ಗಿಲ್ 6 ರನ್, ಆಕಾಶ್ ದೀಪ್ 1 ರನ್, ಪಂತ್ 9 ರನ್, ನಿತೀಶ್ ರೆಡ್ಡಿ 13 ರನ್, ಬುಮ್ರಾ 5 ರನ್, ಸಿರಾಜ್ 4 ರನ್ ಗಳಿಸಿದ್ರೆ, ಜೈಸ್ವಾಲ್, ವಾಷಿಂಗ್ಟನ್ ಸುಂದರ್ ಶೂನ್ಯ ಸುತ್ತಿದರು.
ಇನ್ನೂ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ 62.1 ಓವರ್‌ಗಳಲ್ಲಿ 192 ರನ್ ಗಳಿಸಿತ್ತು.