ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

Public TV
1 Min Read

ಲಂಡನ್: ವಿಶ್ವವೇ ಚುಟುಕು ಕ್ರಿಕೆಟ್ ಕದನದತ್ತ ಮುಖ ಮಾಡಿದ್ದು, ಪ್ರತಿಯೊಂದು ಪಂದ್ಯಗಳೂ ರೋಚಕತೆಗೆ ಸಾಕ್ಷಿಯಾಗುತ್ತಿದೆ. ಟಿ20 ಕ್ರಿಕೆಟ್ ಟೂರ್ನಿಗಳನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈಗ ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್‍ಗೆ ಒಲವು ವ್ಯಕ್ತವಾಗಿದೆ.

ಕೇವಲ 10 ದಿನಗಳಲ್ಲಿ ಇಡೀ ಟೂರ್ನಿಯನ್ನ ಮುಗಿಸುವುದು ಕಷ್ಟ. ಹೀಗಾಗಿ ಒಲಿಂಪಿಕ್ಸ್ ನಂತಹ ಜಾಗತಿಕ ಕ್ರೀಡಾಕೂಟದಲ್ಲಿ 10 ಓವರ್‌ಗಳ ಕ್ರಿಕೆಟ್ ಮಾದರಿ ಸೂಕ್ತವಾಗಿದೆ ಎಂದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1900ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿತ್ತು. ಬಳಿಕ 1998ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಪಟ್ಟಿತ್ತು. ಆ ಬಳಿಕ ಅನೇಕ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಆದರೆ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುವ 2022ರ ಕಾಮನ್ವೆಲ್ತ್ ಕ್ರೀಡಾಕೂಟವು ಮಹಿಳೆಯರ ಟಿ20 ಟೂರ್ನಿಯನ್ನು ಒಳಗೊಂಡಿದೆ. ಆದರೆ ಮೋರ್ಗನ್ ಅವರು ಟಿ10 ಮಾದರಿಯು ಟಿ20, 50 ಓವರ್‍ಗಳ ಅಥವಾ ಟೆಸ್ಟ್ ಕ್ರಿಕೆಟ್‍ಗಿಂತ ಉತ್ತಮ ಎಂದು ಹೇಳಿದ್ದಾರೆ.

“ಟೆಸ್ಟ್, ಏಕದಿನ, ಟಿ20 ಮೂರು ಮಾದರಿಗಳಿಗಿಂತ ಟಿ10 ಒಲಿಂಪಿಕ್ಸ್ ಅಥವಾ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಈ ಮೂಲಕ 10 ದಿನಗಳಲ್ಲಿ ಇಡೀ ಟೂರ್ನಿಯನ್ನು ಮುಗಿಸಬಹುದಾಗಿದೆ” ಎಂದು ಇಯಾನ್ ಮೋರ್ಗಾನ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದಾರೆ.

“ಟಿ20 ಪಂದ್ಯದಿಂದ 8-10 ದಿನಗಳಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಆಯ್ಕೆಯು ಎಲ್ಲರಿಗೂ ಇಷ್ಟವಾಗುತ್ತದೆ, ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಮತ್ತೊಂದು ವಿಚಾರವೆಂದರೆ ಟಿ10 ಪಂದ್ಯದಿಂದ ಹೆಚ್ಚಿನ ಮನರಂಜನೆ ಸಿಗುತ್ತದೆ” ಎಂದು ಮೋರ್ಗಾನ್ ಹೇಳಿದ್ದಾರೆ.

ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವಾದ್ಯಂತ ಹಲವಾರು ಫ್ರ್ಯಾಂಚೈಸ್ ಆಧಾರಿತ ಲೀಗ್‍ಗಳನ್ನು ಹುಟ್ಟುಹಾಕಿದ ಟಿ20 ಕ್ರಿಕೆಟ್ ಅತ್ಯಂತ ಜನಪ್ರಿಯ ಸ್ವರೂಪವಾಗಿ ಹೊರಹೊಮ್ಮಿದೆ. ಈಗ ಟಿ10 ಮಾದರಿಯ ಕ್ರಿಕೆಟ್ ಒಲವು ವ್ಯಕ್ತವಾಗಿದ್ದು ಅಚ್ಚರಿಯೆನಲ್ಲ. ಕೆಲ ಅಭಿಮಾನಿಗಳು ಟೆಸ್ಟ್, ಏಕದಿನ ಪಂದ್ಯಕ್ಕಿಂತಲೂ ಚುಟುಕು ಕ್ರಿಕೆಟ್‍ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *