ಲಕ್ನೋ: ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ರಿಯಾ ಹೊರಾ(21) ಮೃತ ವಿದ್ಯಾರ್ಥಿನಿ. ಸಚೆಂದಿ ಪ್ರದೇಶದ ಖಾಸಗಿ ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಕ್ಯಾಂಪಸ್‍ನ ಹಾಸ್ಟೆಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಮಧ್ಯಾಹ್ನ ರಿಯಾ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ರೀತಿ ಡೆತ್‍ನೋಟ್ ಪತ್ತೆಯಾಗಿಲ್ಲ.
ರಿಯಾ ಸ್ನೇಹಿತರು ನೋಡಿದ ತಕ್ಷಣ ಫ್ಯಾನಿನಿಂದ ಆಕೆಯ ದೇಹವನ್ನು ಕೆಳಗಿಳಿಸಿ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಬಳಿಕ ಅವರು ಪೊಲೀಸರಿಗೆ ವಿಚಾರವನ್ನು ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಶವಗಾರಕ್ಕೆ ರವಾನಿಸಿದ್ದಾರೆ.
ಮೃತ ರಿಯಾ ಪೋಷಕರು ಜಾರ್ಖಂಡಿನಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮಗೆ ಸ್ಥಳದಲ್ಲಿ ಯಾವುದೇ ಡೆತ್‍ನೂಟ್ ಪತ್ತೆಯಾಗಿಲ್ಲ. ಈ ಬಗ್ಗೆ ವಿಚಾರಣೆ ಮಾಡಲು ರಿಯಾಳ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಫೋನ್‍ಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಂಗ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರ ಇಲ್ಲವಾ ಎಂದು ತಿಳಿಯುತ್ತದೆ. ಸದ್ಯಕ್ಕೆ ಮೃತ ರಿಯಾಳ ಪೋಷಕರು ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯವರಾಗಿದ್ದು, ಅವರಿಗೆ ಈ ಬಗ್ಗೆ ಮಾಹಿತಿ ತಿಳಿಸಲಾಗಿದೆ. ಮೃತ ರಿಯಾ ಒಳ್ಳೆಯ ವಿದ್ಯಾರ್ಥಿನಿಯಾಗಿದ್ದು, ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದಳು ಎಂದು ಆಕೆಯ ಸ್ನೇಹಿತರು ತಿಳಿಸಿರುವುದಾಗಿ ಸಿಂಗ್ ಹೇಳಿದ್ದಾರೆ.