ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನ ಉಸಿರುಗಟ್ಟಿಸಿ, ನದಿಗೆ ಬಿಸಾಕಿದ್ದ ಆರೋಪಿಗಳು ಅರೆಸ್ಟ್- ಇದೊಂದು ಕ್ರೌರ್ಯದ ಲವ್ ಸ್ಟೋರಿ

Public TV
2 Min Read

ಬಾಗಲಕೋಟೆ: ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಪ್ರಕರಣವನ್ನು ಬೇಧಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ವಿದ್ಯಾಗಿರಿಯ ನಿವಾಸಿ 20 ವರ್ಷದ ಶಿಲ್ಪಾ ಹುಲಗಣ್ಣಿ ಕೊಲೆಯಾದ ಯುವತಿ. ಮೂರು ವರ್ಷಗಳ ಹಿಂದೆ ಅಂದ್ರೆ 2014 ಅಗಸ್ಟ್ 22ರಂದು ಕಾಲೇಜ್‍ಗೆ ಹೋದ ಶಿಲ್ಪಾ ಕಾಣೆಯಾಗಿದ್ದಳು. ಮಗಳು ಕಾಣೆಯಾದ ಬಳಿಕ ಗಾಬರಿಗೊಳಗಾದ ಪೋಷಕರು ಎಲ್ಲ ಕಡೆ ಹುಡುಕಿದ್ದರು. ಆದರೆ ಶಿಲ್ಪಾ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕೊನೆಗೆ ಶಿಲ್ಪಾ ತಂದೆ ಶಿವಪ್ಪ ನವನಗರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದರೂ ಪೋಷಕರಿಗೆ ಶಿಲ್ಪಾಳ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಡಿವೈಎಸ್ಪಿ ಆಗಿದ್ದ ವಿಠ್ಠಲ್ ಜಗಲಿ ಸರಿಯಾಗಿ ತನಿಖೆ ನಡೆಸದೇ ನಮಗೆ ಅನ್ಯಾಯ ಮಾಡಿದ್ರು ಎಂದು ಆರೋಪಿಸಿ ಧಾರವಾಡ ಉಚ್ಛ ನ್ಯಾಯಾಲಯದಲ್ಲಿ ಹೇಬಿಯಸ್ಸ್ ಕಾರ್ಪಸ್ಸ್ ಅಡಿ ಅರ್ಜಿ ಸಲ್ಲಿಸಿದ್ರು. ನ್ಯಾಯಾಲಯದ ಆದೇಶದನ್ವಯ ಇಂದು ಬಾಗಲಕೋಟೆ ಎ.ಎಸ್.ಪಿ. ಲಕ್ಷ್ಮೀಪ್ರಸಾದ್ ನೇತೃತ್ವದ ತಂಡ ಶಿಲ್ಪಾಳನ್ನು ಕೊಲೆ ಮಾಡಿದ ಆರೋಪಿಗಳನ್ನ ಸೆರೆಹಿಡಿದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆಯಾಗಿದ್ದು ಹೇಗೆ?: ಶಿಲ್ಪಾಳ ಸೋದರ ಮಾವ ಮಹೇಶ್ ಎಂಬಾತ ಆಗಸ್ಟ್ 2014ರಂದು ಕಾಲೇಜು ಬಳಿ ಆಕೆಯನ್ನು ಪಿಕಪ್ ಮಾಡಿದ್ದಾನೆ. ಮಹೇಶ್ ತನ್ನ ಅಕ್ಕನ ಮಗಳಾದ ಶಿಲ್ಪಾಳನ್ನು ಪ್ರೀತಿಸುತ್ತಿದ್ದನು. ಆದ್ರೆ ಶಿಲ್ಪಾ ಈ ಪ್ರೀತಿಯನ್ನು ನಿರಾಕರಿಸಿದ್ದಳು. ಇದ್ರಿಂದ ಕುಪಿತಗೊಂಡ ಮಹೇಶ್ ಅಕ್ಕನ ಮಗಳ ಕೊಲೆಗೆ ಸಂಚು ರೂಪಿಸಿದ್ದನು. ಶಿಲ್ಪಾ ಯಾವಾಗಲೂ ಸೋದರ ಮಾವ ಎಂಬ ಸಲುಗೆಯಿಂದ ಮಹೇಶ್ ಜೊತೆ ಇರುತ್ತಿದ್ದಳು.

ಆಗಸ್ಟ್ 24 ರಂದು ಮಹೇಶ್ ತನ್ನ ಕಾರಿನಲ್ಲಿ ಬಂದು ಶಿಲ್ಪಾಳಿಗೆ ಜಾತ್ರೆಗೆಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮಹೇಶ್ ತನ್ನ ಜೊತೆ ಜಾವೇದ್ ಮತ್ತು ವಾಸು ರೆಡ್ಡಿ ಎಂಬವರನ್ನು ಕರೆದುಕೊಂಡು ಬಂದಿದ್ದಾನೆ. ಬಾಗಲಕೋಟೆಯಿಂದ ವಿಜಯಪುರ ಜಿಲ್ಲೆಯ ಮನಗೂಳಿಯ ಹೋಗುವ ಮಾರ್ಗದಲ್ಲಿ ಕೋಲಾರ ಬ್ರಿಡ್ಜ್ ಬಳಿ ಬರುವಷ್ಟರಲ್ಲಿಯೇ ಶಿಲ್ಪಾಳನ್ನು ಮೂವರು ಉಸಿರುಗಟ್ಟಿ ಕೊಲೆ ಮಾಡಿದ್ದಾರೆ. ನಂತರ ಶಿಲ್ಪಾಳ ಶವವನ್ನು ಕೃಷ್ಣಾ ನದಿಗೆ ಬಿಸಾಡಿದ್ದಾರೆ. ಅನುಮಾನ ಬಾರದರಿಲಿ ಎಂದು ಮಹೇಶ್ ತನ್ನ ಸ್ವಗ್ರಾಮ ಮನಗೂಳಿಗೆ ತೆರಳಿ ಎಲ್ಲರೊಂದಿಗೆ ಜಾತ್ರೆಯಲ್ಲಿ ಭಾಗವಹಿಸಿದ್ದಾನೆ.

ಮಹೇಶ್ ಸಿಕ್ಕಿದ್ದು ಹೇಗೆ?: ಶಿಲ್ಪಾ ಕಾಣೆಯಾದ ಬಳಿಕ ಮಹೇಶ್ ಆಕೆಯ ಪೋಷಕರೊಂದಿಗೆ ಹುಡುಕಾಟ ನಡೆಸುವಂತೆ ನಾಟಕ ಮಾಡಿದ್ದನು. ಕೊನೆಗೆ ಪೋಷಕರೊಂದಿಗೆ ಬಂದು ದೂರು ದಾಖಲಿಸಿದ್ದನು. ಆದರೆ ಶಿಲ್ಪಾ ಪೋಷಕರು ಮಾತ್ರ ಮಹೇಶ್ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು. ಅನುಮಾನದ ಬಳಿಕವೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಹೇಬಿಯಸ್ ಕಾರ್ಪಸ್ ಅಡಿ ದೂರು ದಾಖಲಾದಾಗ ಪೊಲೀಸರು ಮಹೇಶನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಲ್ಲಿಯೂ ಸಹ ಮಹೇಶ್ ತಪ್ಪಿಸಿಕೊಂಡಿದ್ದನು.

ಪೊಲೀಸರ ವಿಚಾರಣೆಯಿಂದ ಅನುಮಾನಗೊಂಡು ಮಹೇಶ್ ಗೆಳಯ ವಾಸುರೆಡ್ಡಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ. ಸದ್ಯ ನದಿಗೆ ಬಿಸಾಡಿದ್ದರಿಂದ ಶಿಲ್ಪಾಳ ಶವ ಪತ್ತೆಯಾಗಿಲ್ಲ. ಮತ್ತೊಬ್ಬ ಆರೋಪಿ ಜಾವೇದ್ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಾಣೆಯಾದ ಮಗಳು ಇಂದಲ್ಲ ನಾಳೆ ಮನೆಗೆ ಹಿಂದಿರುಗಿ ಬರುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದ ಶಿಲ್ಪಾ ಪೋಷಕರಿಗೆ ಮಗಳ ಕೊಲೆಯ ಸುದ್ದಿ ದೊಡ್ಡ ಆಘಾತವನ್ನುಂಟು ಮಾಡಿದೆ.

ಆರೋಪಿ ಮಹೇಶ್
ಆರೋಪಿ ವಾಸು ರೆಡ್ಡಿ

Share This Article
Leave a Comment

Leave a Reply

Your email address will not be published. Required fields are marked *