ಬದರಿನಾಥ್‍ನಲ್ಲಿ ಹೆಲಿಕಾಪ್ಟರ್ ಪತನ- ರೋಟರ್ ಬ್ಲೇಡ್‍ಗಳು ತಗುಲಿ ಎಂಜಿನಿಯರ್ ಸಾವು, ಇಬ್ಬರು ಪೈಲೆಟ್‍ಗಳಿಗೆ ಗಾಯ

Public TV
1 Min Read

ಡೆಹ್ರಾಡೂನ್: ಉತ್ತರಾಖಂಡ್‍ನ ಬದರಿನಾಥ್‍ನಲ್ಲಿ ಇಂದು ಯಾತ್ರಿಕರನ್ನು ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಇಬ್ಬರು ಪೈಲೆಟ್‍ಗಳು ಗಾಯಗೊಂಡಿದ್ದಾರೆ.

ಹೆಲಿಕಾಪ್ಟರ್‍ನ ಸಿಬ್ಬಂದಿವರ್ಗದ ಭಾಗವಾಗಿದ್ದ ಎಂಜಿನಿಯರ್ ಸಾವನ್ನಪ್ಪಿದ್ದು, ಇಬ್ಬರು ಪೈಲೆಟ್‍ಗಳಿಗೆ ಗಾಯವಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಎಂಜಿನಿಯರ್ ವಿಕ್ರಮ್ ಲಂಬಾ ಅಸ್ಸಾಮ್ ನಿವಾಸಿಯಾಗಿದ್ದು, ರೋಟರ್ ಬ್ಲೇಡ್‍ಗಳು ತಗುಲಿದ ಪರಿಣಾಮ ಸಾವನ್ನಪ್ಪಿದ್ದಾರೆಂದು ಚಾಮೋಲಿಯ ಪೊಲೀಸ್ ವರಿಷ್ಠಾಧಿಕಾರಿ ತೃಪ್ತಿ ಭಟ್ ಹೇಳಿದ್ದಾರೆ.

ಇಂದು ಬೆಳಿಗ್ಗೆ 7.45ರ ಸಮಯದಲ್ಲಿ ವಿಮಾನ ಟೇಕ್ ಆಫ್ ಆಗುವ ವೇಳೆ, ಅಗತ್ಯವಾದ ಗಾಳಿಯ ಒತ್ತಡವಿಲ್ಲದ ಕಾರಣ ಸಮತೋಲನ ಕಳೆದುಕೊಂಡು ಪತನಗೊಂಡಿದೆ. ಘಟನೆಯಲ್ಲಿ ಪುಣೆಯವರಾದ ಪೈಲೆಟ್ ಸಂಜಯ್ ವಾಸಿ ಅವರ ಬೆನ್ನಿಗೆ ಪೆಟ್ಟಾಗಿದೆ. ಕಾನ್ಪುರ ನಿವಾಸಿಯಾದ ಮತ್ತೊಬ್ಬ ಪೈಲೆಟ್ ಅಲ್ಕಾ ಶುಕ್ಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಲಿಕಾಪ್ಟರ್‍ನಲ್ಲಿದ್ದ ಯಾತ್ರಿಕರೆಲ್ಲರೂ ಗುಜರಾತ್‍ನ ವಡೋದರಾದವರಾಗಿದ್ದು, ಅವರವರ ಊರುಗಳಿಗೆ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತನಗೊಂಡ ಅಗಸ್ಟಾ 119 ಹೆಲಿಕಾಪ್ಟರ್ ಮುಂಬೈ ಮೂಲದ ಖಾಸಗಿ ಆಪರೇಟರ್ ಕ್ರೆಸ್ಟಲ್ ಏವಿಯೇಷನ್‍ಗೆ ಸೇರಿದ್ದಾಗಿದ್ದು, ಹರಿದ್ವಾರಕ್ಕೆ ಹೊರಟಿತ್ತು ಎಂದು ವರದಿಯಾಗಿದೆ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *