ಕೌಟುಂಬಿಕ ಕಲಹ – ನದಿಗೆ ಹಾರಿ ಪ್ರಾಣ ಬಿಟ್ಟ ಇಂಜಿನಿಯರ್

Public TV
1 Min Read

ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ಇಂಜಿನಿಯರ್ (Engineer) ಒಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ (Hassan) ಶೆಟ್ಟಿಹಳ್ಳಿ ಗ್ರಾಮದ ಬಳಿಯ ಹೇಮಾವತಿ ನದಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಹಾಸನದ ಇಂದಿರಾನಗರದ ನಿವಾಸಿ ಪ್ರಮೋದ್ (35) ಎಂದು ಗುರುತಿಸಲಾಗಿದೆ. ಪ್ರಮೋದ್‌ ಹಾಗೂ ಅವರ ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಆಕೆಯ ತಮ್ಮಂದಿರು ಅವರಿಗೆ ಕಿರುಕುಳ ನೀಡುತ್ತಿದ್ದರು, ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಡಿ.29 ರಂದು ಸಂಜೆ ಪ್ರಮೋದ್ ಮನೆಯಲ್ಲಿಯೇ ಮೊಬೈಲ್ ಬಿಟ್ಟು ತೆರಳಿದ್ದರು. ಪ್ರಮೋದ್‌ಗಾಗಿ ಪೋಷಕರು ಹುಡುಕಾಟ ನಡೆಸಿದ್ದು, ನಂತರ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಅಂದು ರಾತ್ರಿ ಹೇಮಾವತಿ ನದಿಯ ಸೇತುವೆ ಬಳಿ ಪ್ರಮೋದ್ ಬೈಕ್ ಪತ್ತೆಯಾಗಿತ್ತು. ಅದನ್ನು ಕಂಡ ಸ್ಥಳೀಯರು ಪರಿಶೀಲನೆ ನಡೆಸಿದ ವೇಳೆ ಬೈಕ್‌ನಲ್ಲಿ ಬ್ಯಾಂಕ್‌ನ ಪಾಸ್‌ಬುಕ್‌ಗಳು ಪತ್ತೆಯಾಗಿದ್ದವು. ಪಾಸ್‌ಬುಕ್‌ನಲ್ಲಿದ್ದ ಫೋನ್ ನಂಬರ್‌ಗೆ ಕರೆ ಮಾಡಿದ ವೇಳೆ ಪ್ರಮೋದ್ ತಂದೆ ಕರೆ ಸ್ವೀಕರಿಸಿದ್ದು, ನದಿಯ ಬಳಿ ದ್ವಿಚಕ್ರ ವಾಹನ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದರು.

ಡಿ.30 ರಿಂದ ಹೇಮಾವತಿ ನದಿಯಲ್ಲಿ ಪೊಲೀಸರು (Police) ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಬುಧವಾರ ಬೆಳಗ್ಗೆ ಪ್ರಮೋದ್ ಶವ ನದಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article