ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

Public TV
2 Min Read

– ರೇಖಾಚಿತ್ರ, ಧ್ವನಿ ರೆಕಾರ್ಡಿಂಗ್‌ ಸಮೇತ ಮಾಹಿತಿ ಹಂಚಿಕೊಂಡಿದ್ದ‌ ಸ್ಪೈ

ಮುಂಬೈ: ಆಪರೇಷನ್‌ ಸಿಂಧೂರ ಬಳಿಕ ದೇಶದಲ್ಲಿ ಪಾಕಿಸ್ತಾನ (Pakistan) ಪರ ಬೇಹುಗಾರಿಕೆ ನಡೆಸುತ್ತಿದ್ದವರ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಹೀಗಾಗಿ ಕಳೆದ ಎರಡು ವಾರಗಳಲ್ಲಿ ಸುಮಾರು 20 ಮಂದಿ ಬೇಹುಗಾರರ (Spying) ಹೆಡೆಮುರಿ ಕಟ್ಟಲಾಗಿದೆ. ಒಂದು ದಿನದ ಹಿಂದೆಯಷ್ಟೇ ಐಎಸ್‌ಐ ಅಧಿಕಾರಿಗಳಿಗೆ ಭಾರತದ ಸಿಮ್‌ ಕಾರ್ಡ್‌ಗಳನ್ನ ಪೂರೈಸುತ್ತಿದ್ದ ರಾಜಸ್ಥಾನದ ವ್ಯಕ್ತಿಯನ್ನ ಬಂಧಿಸಲಾಗಿತ್ತು. ಇಂದು ಥಾಣೆಯಲ್ಲಿ ಮತ್ತೊರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ.

ಥಾಣೆಯ ಕಲ್ವಾ ನಿವಾಸಿಯಾದ ಮೆಕ್ಯಾನಿಕಲ್ ಎಂಜಿನಿಯರ್ (Mechanical Engineer) ರವೀಂದ್ರ ವರ್ಮಾ (27) ಬಂಧಿತ ಆರೋಪಿ. ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ATS) ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ರವೀಂದ್ರನನ್ನ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಫೇಸ್‌ಬುಕ್‌ನಲ್ಲಿ ಮಹಿಳೆಯಂತೆ ಡ್ರಾಮಾ ಮಾಡ್ತಿದ್ದ ಪಾಕಿಸ್ತಾನಿ ಏಜೆಂಟ್‌ನಿಂದ (Pakistani Agent) ಹನಿಟ್ರ್ಯಾಪ್‌ಗೆ ರವೀಂದ್ರ ಒಳಗಾಗಿದ್ದ. ಬಳಿಕ ಹಣದ ಆಮಿಷ ಒಡ್ಡಿ ಆತನಿಂದ ಸೂಕ್ಷ್ಮ ಮಾಹಿತಿಗಳನ್ನ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈತ 2024 ರಿಂದ ಪಾಕಿಸ್ತಾನಿ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದ. ದೇಶದ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ನೀಡಿದ್ದ. ರೇಖಾಚಿತ್ರಗಳು ಮತ್ತು ಆಡಿಯೋ ರೆಕಾರ್ಡಿಂಗ್‌ ಸಮೇತ ಪಾಕಿಸ್ತಾನಿ ಗುಪ್ತಚರ ಆಪರೇಟಿವ್ (POI)ಗೆ ಮಾಹಿತಿ ಹಂಚಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ವಿದೇಶಗಳಲ್ಲಿನ ವಿವಿಧ ಬ್ಯಾಂಕ್‌ ಖಾತೆಗಳಿಂದ ಭಾರೀ ಮೊತ್ತದ ಹಣ ಪಡೆದುಕೊಂಡಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆ ಸಮಯದಲ್ಲಿ ಉದ್ದೇಶಪೂರ್ವಕವಾಗಿಯೇ ರವೀಂದ್ರ ವರ್ಮಾ ಸೂಕ್ಷ್ಮ ಮಾಹಿತಿಯನ್ನ ಪಾಕ್‌ ಏಜೆಂಟ್‌ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂಬುದೂ ಗೊತ್ತಾಗಿದೆ ಎಂದು ವರದಿಗಳು ತಿಳಿಸಿವೆ.

ವರ್ಮಾ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಇದೇ ಕಾರಣದಿಂದ ದಕ್ಷಿಣ ಮುಂಬೈನಲ್ಲಿರುವ ನೇವಲ್ ಡಾಕ್‌ಯಾರ್ಡ್‌ಗೆ ಪ್ರವೇಶಿಸಲು ಅಧಿಕಾರವಿತ್ತು. ಅಲ್ಲದೇ ಈತ ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿಯೂ ಪ್ರಯಾಣಿಸುತ್ತಿದ್ದ. ಡಾರ್ಕ್‌ಯಾರ್ಡ್‌ಗೆ ಮೊಬೈಲ್‌ ಕೊಂಡೊಯ್ಯಲು ಅನುಮತಿ ಇಲ್ಲದಿದ್ದ ಕಾರಣ ರೇಖಾ ಚಿತ್ರಗಳನ್ನ ರೆಡಿ ಮಾಡಿಕೊಂಡಿದ್ದ. ಅಲ್ಲಿಂದ ಆಚೆಬಂದ ನಂತರ ವಾಯ್ಸ್‌ ರೆಕಾರ್ಡಿಂಗ್‌ ಮಾಡಿ ರೇಖಾ ಚಿತ್ರಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಟಿಎಸ್ ಸೋಮವಾರದ ವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದೆ.

Share This Article