– ರಸ್ತೆ ದಾಟುತ್ತಿದ್ದ ಯುವತಿಗೆ ಕಾರು ಡಿಕ್ಕಿ
– ಅಪ್ಪನಿಗೆ ಆರ್ಥಿಕ ಸಹಾಯ ಮಾಡ್ತಿದ್ಲು
ಹೈದರಾಬಾದ್: ನಿರ್ಲಕ್ಷ್ಯದ ಚಾಲನೆಯಿಂದಾಗಿ ಕೆಲವೇ ದಿನಗಳಲ್ಲಿ ಹಸೆಮಣೆ ಮೇಲೆ ಕೂರಬೇಕಿದ್ದ ಯುವತಿಯೊಬ್ಬಳು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಮುತ್ಯಾಲ ಉಮಾ (26) ಮೃತ ಯುವತಿ. ಈ ಘಟನೆ ಸೋಮವಾರ ರಾತ್ರಿ ವಿಜಯವಾಡದ ಲುಬ್ಬಿಪೇಟೆಯ ಎಂಜಿ ರೋಡ್‍ನಲ್ಲಿ ನಡೆದಿದೆ. ಜಗ್ಗಯ್ಯಪೇಟೆ ನಿವಾಸಿಯಾಗಿದ್ದ ಮುತ್ಯಾಲ ರಾಮು ತನ್ನ ಪತ್ನಿ, ಮಗ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಅವರ ಪುತ್ರಿ ಮುತ್ಯಾಲ ಉಮಾ ಪದವಿ ಪೂರ್ಣಗೊಳಿಸಿದ್ದಳು. ನಂತರ ತನ್ನ ತಂದೆಗೆ ಹಣಕಾಸು ಸಹಾಯ ಮಾಡಲು ನಾಲ್ಕು ವರ್ಷಗಳಿಂದ ನಗರದ ಕಾಲ್ ಸೆಂಟರ್‌ವೊಂದರಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು.
ಇತ್ತೀಚೆಗೆ ಮುತ್ಯಾಲ ರಾಮು ಏಪ್ರಿಲ್ 8 ರಂದು ಮಗಳ ನಿಶ್ಚಿತಾರ್ಥವನ್ನು ರಾಯಲಾ ವಿವೇಕ್ ಕುಮಾರ್‌ನೊಂದಿಗೆ ನಿಗದಿ ಮಾಡಿದ್ದರು. ಹುಡುಗ ಅವರ ಆಪ್ತ ಸಂಬಂಧಿಯಾಗಿದ್ದು, ಒಂಗೋಲ್‍ನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ. ಈತನೊಂದಿಗೆ ಉಮಾಳ ನಿಶ್ಚಿತಾರ್ಥ ಹಾಗೂ ಮದುವೆ ನಿಗದಿಯಾಗಿತ್ತು.
ಸೋಮವಾರ ರಾತ್ರಿ 8 ಗಂಟೆಗೆ, ಎಂಜಿ ರೋಡ್‍ನ ಎಟಿಎಂಗೆ ಹೋಗಲು ಯುವತಿ ರಸ್ತೆ ದಾಟುತ್ತಿದ್ದಳು. ಈ ವೇಳೆ ಏಕಾಏಕಿ ಅತಿವೇಗದಿಂದ ಆಗಮಿಸಿದ ಮೂವರು ಯುವಕರಿದ್ದ ಕಾರು ಉಮಾಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಉಮಾ ತಲೆಯ ಹಿಂಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿ ತೀವ್ರ ರಸ್ತಸ್ರಾವ ಉಂಟಾಗಿತ್ತು. ತಕ್ಷಣ ಆಕೆಯನ್ನು ಹತ್ತಿರದ ರಮೇಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಂಧ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಯುವತಿಯ ಬ್ರೈನ್ ಡೆಡ್ ಆಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮಾಹಿತಿ ಪಡೆದ ಕೃಷ್ಣಲಂಕಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಮಾಡಿದ ವಾಹನ ಮತ್ತು ಚಾಲಕ ಜಯಂತ್‍ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.