ನವದೆಹಲಿ: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸಿದ್ರೆ ಶೇ.100 ರಷ್ಟು ದ್ವಿತೀಯ ಸುಂಕ ವಿಧಿಸುವ ಸಾಧ್ಯತೆಯಿದೆ ಎಂಬ ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರ ಬೆದರಿಕೆಯನ್ನು ಭಾರತ ತಳ್ಳಿಹಾಕಿದೆ. ಜೊತೆಗೆ ದೇಶದ ಇಂಧನ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿರುವುದಾಗಿಯೂ ತಿಳಿಸಿದೆ.
ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂ ನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ 100% ದ್ವಿತೀಯ ಸುಂಕ ವಿಧಿಸುವುದಾಗಿ ರುಟ್ಟೆ ಬೆದರಿಕೆಹಾಕಿದ್ದರು.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಪ್ರತಿಕ್ರಿಯಿಸಿದ್ದಾರೆ. ತೈಲ ಪೂರೈಕೆಯ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವುದು ರಾಷ್ಟ್ರ ರಾಜಧಾನಿಗೆ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರಲ್ಲದೇ ದ್ವಿಮುಖ ಮಾನದಂಡ ಅಳವಡಿಸಿಕೊಳ್ಳದಂತೆಯೂ ಎಚ್ಚರಿಕೆ ನೀಡಿದ್ದಾರೆ. ಮಾರುಕಟ್ಟೆಗಳಲ್ಲಿ ಏನು ಲಭ್ಯವಾಗುತ್ತಿದೆ, ಜಾಗತಿಕ ಪರಿಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಈ ವಿಷಯದ ಕುರಿತು ಅನೇಕ ವರದಿಗಳನ್ನು ನಾವು ನೋಡಿದ್ದೇವೆ. ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿಯೂ ಗಮನಿಸಿದ್ದೇವೆ. ನಮ್ಮ ಜನಕ್ಕೆ ಬೇಕಾದ ಇಂಧನದ ಅಗತ್ಯತೆಗಳನ್ನ ಭದ್ರಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಜಾಗತಿಕ ಪರಿಸ್ಥಿತಿಗಳು ನಮ್ಮನ್ನ ಗೈಡ್ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ರುಟ್ಟೆ ಹೇಳಿದ್ದೇನು?
50 ದಿನಗಳಲ್ಲಿ ಶಾಂತಿ ಒಪ್ಪಂದದ ಹೊರತು ರಷ್ಯಾದಿಂದ ರಫ್ತು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100ರಷ್ಟು ದ್ವಿತೀಯ ಸುಂಕದ ಬೆದರಿಕೆಯನ್ನು ಟ್ರಂಪ್ ಹಾಕಿದ್ದರು. 2022 ರಲ್ಲಿ ಉಕ್ರೇನ್ ವಿರುದ್ಧ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದ ಪ್ರಮುಖ ವ್ಯಾಪಾರ ಪಾಲುದಾರನಾದ ಭಾರತ, ಬ್ರೆಜಿಲ್ ಮತ್ತು ಚೀನಾಗಳಿಗೆ ರುಟ್ಟೆ ಎಚ್ಚರಿಕೆ ನೀಡಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿ, ಚೀನಾ, ಭಾರತ ಮತ್ತು ಬ್ರೆಜಿಲ್ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇದರಿಂದ ನಿಮಗೆ ತೀವ್ರ ತೊಂದರೆಯಾಗಬಹುದು. ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಮಾಡಿ, ಉಕ್ರೇನ್ ವಿರುದ್ಧದ ಶಾಂತಿ ಮಾತುಕತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹೇಳಿ, ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ ಎಂದು ಹೇಳಿದ್ದರು.