ಸತ್ತುಹೋಗಿರಬಹುದು ಎಂದುಕೊಂಡಿದ್ದ ನಾಯಿ 10 ವರ್ಷಗಳ ಬಳಿಕ ಮನೆಗೆ ವಾಪಸ್ ಬಂತು!

Public TV
2 Min Read

ವಾಷಿಂಗ್ಟನ್: ಕಳೆದುಹೋದ ವಸ್ತು ವಾಪಸ್ ಸಿಕ್ಕಾಗ ತುಂಬಾ ಖುಷಿಯಾಗುತ್ತೆ. ಅದರಲ್ಲೂ ಸಾಕುಪ್ರಾಣಿಗಳು ವರ್ಷಾನುಗಟ್ಟಲೆ ನಾಪತ್ತೆಯಾಗಿ ಮತ್ತೆ ವಾಪಸ್ ಸಿಕ್ಕರೆ? ಇದೇ ರೀತಿ ಇಲ್ಲೊಂದು ನಾಯಿ ಕಾಣೆಯಾದ 10 ವರ್ಷಗಳ ನಂತರ ಮನೆಗೆ ವಾಪಸ್ ಬಂದಿದೆ.

ಅಮೆರಿಕದ ಪೆನಿಸಿಲ್‍ವೇನಿಯಾದಲ್ಲಿ ವಾಸವಿರೋ ದೇಬ್ರಾ ಸುಯಿರ್‍ವೆಲ್ಡ್ ತನ್ನ ಪ್ರೀತಿಯ ಕಪ್ಪು ಬಣ್ಣದ ಲ್ಯಾಬ್ ಮಿಕ್ಸ್ ಥಳಿಯ ನಾಯಿ ಅಬ್ಬಿ ಯನ್ನ ಕಳೆದುಕೊಂಡಿದ್ದರು. ನಾಯಿ ನಾಪತ್ತೆಯಾಗಿ ಎಷ್ಟು ವರ್ಷಗಳಾದ್ರೂ ಸಿಗದ ಕಾರಣ ಅದು ಸತ್ತುಹೋಗಿರಬಹುದು ಎಂದುಕೊಂಡಿದ್ದರು. ಆದ್ರೆ ನಾಯಿ ಅಬ್ಬಿ ಬದುಕಿತ್ತಷ್ಟೇ ಅಲ್ಲದೆ ಕಾಣೆಯಾದ 10 ವರ್ಷಗಳ ನಂತರ ಮಾಲಕಿಗೆ ಸಿಕ್ಕಿದೆ. ಕುಟುಂಬದೊಂದಿಗೆ ನಾಯಿ ಮತ್ತೆ ಸೇರಿರುವ ಬಗೆಗಿನ ಪೋಸ್ಟ್ ಎಲ್ಲರ ಅಚ್ಚರಿ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.

ನಾಯಿ ಸಿಕ್ಕಿದೆ ಎಂದು ಕರೆ ಬಂದಾಗ ನನಗೆ ಏನು ಹೇಳಬೇಕು ಎನ್ನುವುದೇ ಗೊತ್ತಾಗಲಿಲ್ಲ. ಅದು ಸತ್ತುಹೋಗಿದೆ ಎಂದು ತಿಳಿದುಕೊಂಡಿದ್ದೆವು. ಆದ್ರೆ ಈಗ ಅಬ್ಬಿ ವಾಪಸ್ ಬಂದಿರುವುದು ನಮ್ಮ ಮಕ್ಕಳ ಬಾಲ್ಯ ಮರಳಿ ಬಂದಿದೆ ಅನ್ನಿಸುತ್ತಿದೆ. ನಮ್ಮ ಕುಟುಂಬದ ಒಂದು ಭಾಗ ವಾಪಸ್ ಬಂದಂತಿದೆ ಎಂದು ಸುಯಿರ್‍ವೆಲ್ಡ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

ಇಲ್ಲಿನ ಪತ್ರಿಕೆಯೊಂದರ ವರದಿಯ ಪ್ರಕಾರ ನಾಯಿ 10 ವರ್ಷಗಳ ಹಿಂದೆ ಅಂದ್ರೆ 2008ರಲ್ಲಿ ಸುಯಿರ್‍ವೆಲ್ಡ್ ಅವರ ಮಕ್ಕಳ ಜೊತೆ ಮನೆಯ ಬಳಿ ಆಟವಾಡ್ತಿದ್ದಾಗ ನಾಪತ್ತೆಯಾಗಿತ್ತು. 10 ವರ್ಷಗಳ ಬಳಿಕ ಜನವರಿ 30ರಂದು, ಕಾಣೆಯಾಗಿದ್ದ ಸ್ಥಳದಿಂದ 10 ಮೈಲಿ ದೂರದಲ್ಲಿ ನಾಯಿ ಪತ್ತೆಯಾಗಿದೆ. ನಾಯಿ ಬಗ್ಗೆ ಪೊಲೀಸರು ಹಾಗೂ ಪ್ರಾಣಿ ರಕ್ಷಣಾ ಕಾರ್ಯಕರ್ತರಿಗೆ ಮಾಹಿತಿ ಬಂದಿತ್ತು. ಪ್ರಾಣಿ ರಕ್ಷಣಾ ಸಿಬ್ಬಂದಿಗೆ ನಾಯಿಯ ಕುತ್ತಿಗೆಯಲ್ಲಿ ಮೈಕ್ರೋ ಚಿಪ್‍ವೊಂದು ಸಿಕ್ಕಿದ್ದು, ಅದರ ಮೂಲಕ ಮಾಲೀಕರನ್ನ ಪತ್ತೆ ಮಾಡಲಾಗಿದೆ. ಅಬ್ಬಿ ಮನೆಗೆ ವಾಪಸ್ ಬಂದಿರುವುದರಿಂದ ಕುಟುಂಬ ಸಂತೋಷಗೊಂಡಿದ್ದ, ಇದರ ಖುಷಿಗೆ ಔತಣ ಕೂಟ ಏರ್ಪಡಿಸಲು ಪ್ಲಾನ್ ಮಾಡ್ತಿದ್ದಾರೆ ಎಂದು ವರದಿಯಾಗಿದೆ.

ಇನ್‍ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್‍ಗೆ ಹಲವಾರು ಮಂದಿ ಮೆಚ್ಚುಗೆಯಿಂದ ಕಮೆಂಟ್ ಮಾಡಿದ್ದಾರೆ. ಅಲ್ಲದೆ ಇಷ್ಟು ವಯಸ್ಸಾಗಿದ್ರೂ ನಾಯಿ ಇಷ್ಟು ಆರೋಗ್ಯವಾಗಿ ಕಾಣ್ತಿದೆ ಅಂದ್ರೆ ಯಾರೋ ಇಷ್ಟು ವರ್ಷ ಅದರ ಆರೈಕೆ ಮಾಡಿರಬೇಕು. ಅವರನ್ನು ಕೂಡ ಪತ್ತೆ ಮಾಡುವ ಪ್ರಯತ್ನವಾಗಬೇಕು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *