ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

Public TV
2 Min Read

ಲಾಸ್‌ ಏಂಜಲೀಸ್‌: ಸ್ಟೀರಿಂಗ್ ವೀಲ್‌, ಪೆಡಲ್‌ ಹೊಂದಿರದ ಸ್ವಯಂ-ಚಾಲನೆ ಮಾಡುವ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧಾರಿತ ಎಲೆಕ್ಟ್ರಿಕ್‌ ರೋಬೋಟ್ಯಾಕ್ಸಿಯನ್ನು (Robotaxi) ಟೆಸ್ಲಾ (Tesla) ಕಂಪನಿ ಬಿಡುಗಡೆ ಮಾಡಿದೆ.

ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಇಒ ಎಲಾನ್‌ ಮಸ್ಕ್‌ (Elon Musk), ಈ ಕಾರಿನ ಬೆಲೆ 30 ಸಾವಿರ ಡಾಲರ್‌(ಅಂದಾಜು 25 ಲಕ್ಷ ರೂ.) ಅಥವಾ ಅದಕ್ಕಿಂತಲೂ ಕಡಿಮೆ ಇರಲಿದೆ. ವೈರ್‌ಲೆಸ್ ಚಾರ್ಜ್‌ ಮಾಡಬಹುದಾದ ಈ ಕಾರು ಮಾನವ ಚಾಲಿತ ಕಾರುಗಳಿಗಿಂದ 10 ರಿಂದ 20 ಪಟ್ಟು ಸುರಕ್ಷಿತವಾಗಿರಲಿದೆ ಎಂದು ತಿಳಿಸಿದರು.

ಎರಡು ಆಸನ, ಚಿಟ್ಟೆಯಂತೆ ತೆರೆಯಬಹುದಾದ ಬಾಗಿಲು(Butterfly Doors) ಹೊಂದಿರುವ ಈ ಕಾರಿನ ಉತ್ಪಾದನೆ 2026ರಲ್ಲಿ ಆರಂಭವಾಗಲಿದೆ. ಮಾರಾಟ ಜಾಸ್ತಿಯಾದಂತೆ ಬೆಲೆಯೂ ಕಡಿಮೆಯಾಗಲಿದೆ. 2027ರಲ್ಲಿ ಈ ಕಾರು ಮಾರುಕಟ್ಟೆಯಲ್ಲಿ (Car Market) ಲಭ್ಯವಿರಲಿದೆ ಎಂದು ಹೇಳಿದರು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

ಸುಮಾರು 10 ವರ್ಷದ ಹಿಂದೆ ಮಸ್ಕ್‌ ಸ್ವಯಂ ಚಾಲನಾ ಸಾಮರ್ಥ್ಯ ಇರುವ ರೋಬೋಟ್ಯಾಕ್ಸಿಯ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

ಈ ಕಾರ್ಯಕ್ರಮದಲ್ಲೇ ದಿ ರೋಬೋವನ್ (The Robovan) ಎಂದು ಕರೆಯುವ ಚಾಲಕರ ರಹಿತ ಪ್ರಯಾಣಿಕ ವಾಹನವನ್ನು ಸಹ ಪ್ರದರ್ಶಿಸಲಾಯಿತು. ಈ ವ್ಯಾನಿನಲ್ಲೂ ಸ್ಟೀರಿಂಗ್ ವೀಲ್, ಪೆಡಲ್ ಇಲ್ಲ. ಇದರಲ್ಲಿ ಇದು 20 ಜನರು ಕುಳಿತುಕೊಂಡು ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೇ ಸರಕುಗಳನ್ನು ಸಾಗಿಸುವ ವ್ಯಾನ್‌ ಆಗಿಯೂ ಪರಿವರ್ತಿಸಬಹುದು.

ಎಲಾನ್‌ ಮಸ್ಕ್‌ ಅವರು ಈ ವ್ಯಾನ್‌ ಉತ್ಪಾದನೆ ಸೇರಿದಂತೆ ಬಿಡುಗಡೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ.

Share This Article