ಎಲಿಫೆಂಟ್ ಗೋಲ್ಮಾಲ್: ಕಾಫಿ ತೋಟದ ಕೆಲಸಕ್ಕೆ ಆನೆ ಬಳಕೆ

Public TV
1 Min Read

-ಟಿಂಬರ್ ಮಾಫಿಯಾಕ್ಕಾಗಿ ಆನೆಯನ್ನು ಕರೆತಂದಿರೋ ಶಂಕೆ!

ಚಿಕ್ಕಮಗಳೂರು: ಕಾಡು ಪ್ರಾಣಿಗಳನ್ನ ಸರ್ಕಸ್ ಅಥವಾ ದುಡಿಸಿಕೊಳ್ಳುವದಕ್ಕಾಗಿ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಚಿಕ್ಕಮಗಳೂರಿನ ಪಂಡರವಳ್ಳಿ ಕಾಫಿತೋಟದ ಕೆಲಸಕ್ಕೆ ಆನೆಯನ್ನ ಅಕ್ರಮವಾಗಿ ಕರೆತರಲಾಗಿತ್ತು. ಆರ್‍ಎಫ್‍ಓ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ಕೇರಳದಿಂದ ಬಂದಿದ್ದ ಆನೆಯನ್ನ ರಕ್ಷಣೆ ಮಾಡಲಾಗಿದೆ.

ಅರಣ್ಯ ಅಧಿಕಾರಿಗಳು ಶನಿವಾರ ರಾತ್ರಿ ಆನೆಯನ್ನ ಅದೇ ಲಾರಿಯಲ್ಲಿ ಪುನಃ ಕೇರಳಕ್ಕೆ ಕಳುಹಿಸಿದ್ದಾರೆ. ಆನೆ ಮೂಲತಃ ಅಸ್ಸಾಂ ರಾಜ್ಯದ ಜೋನೋರಾಂ ಬಹುರಾ ಎಂಬವರಿಗೆ ಸೇರಿದೆ. ಆನೆಗೆ ಅಳವಡಿಸಿರೋ ಮೈಕ್ರೋ ಚಿಪ್ ಕೂಡ ಅಸ್ಸಾಂ ಅಂತಾ ತೋರಿಸುತ್ತಿದೆ.

ಆನೆ ನಮ್ಮದೆಂದು ಹೇಳಿಕೊಳ್ಳುವ ಕೇರಳದ ಪಿ.ಕೋಯಾ ಮತ್ತು ಸೈದಲಿ ಕುಟ್ಟಿ ಎಂಬವರ ಮೇಲೆ ಅಥವಾ ಆನೆಯ ಮೂಲ ಮಾಲೀಕನ ಮೇಲಾಗಲಿ ಪ್ರಕರಣ ದಾಖಲು ಮಾಡದೆ ಕೇವಲ ಮಾವುತ ಹಾಗೂ ಲಾರಿಯ ಚಾಲಕನ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಟಿಂಬರ್ ಮಾಫಿಯಾ ಪ್ರಭಾವಕ್ಕೆ ಕಟ್ಟುಬಿದ್ದು ಅಧಿಕಾರಿಗಳು ಆನೆಯ ಮಾಲೀಕರನ್ನು ರಕ್ಷಿಸಿದ್ದಾರೆಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

ಆನೆಯನ್ನ ಅಸ್ಸಾಂನಿಂದ ಕೇರಳಾಕ್ಕೆ ತಂದಿರೋ ಬಗ್ಗೆಯೂ ಅಥವಾ ಸಾಗಾಟದ ಅನುಮತಿ ಪತ್ರವೂ ಯಾರ ಬಳಿಯೂ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ ಆನೆಯನ್ನ ಕೇರಳದಲ್ಲಿ ಇಟ್ಟುಕೊಂಡು ಟಿಂಬರ್ ಕೆಲಸಕ್ಕೆ ಕರ್ನಾಟಕಕ್ಕೆ ತರಲಾಗಿದೆ. ಇದೊಂದು ದೊಡ್ಡ ಪ್ರಕರಣವಾಗಿದ್ದು ಸೂಕ್ತ ತನಿಖೆಯಾಗಬೇಕು. ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಆನೆ ಕಳ್ಳಸಾಗಾಣೆ ದಂಧೆಕೋರರ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸುವ ಪರಿಸರವಾದಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *