ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ `ಆನೆಪಥ’: ಈಶ್ವರ್ ಖಂಡ್ರೆ

Public TV
3 Min Read

– ಆವಾಸಸ್ಥಾನ ರಕ್ಷಣೆಗೆ ಐಐಎಸ್‌ಸಿಯೊಂದಿಗೆ ಅರಣ್ಯ ಇಲಾಖೆ ಐತಿಹಾಸಿಕ ಒಡಂಬಡಿಕೆ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಮತ್ತು ಕಾಡಿನಂಚಿನ ರೈತರ ಬೆಳೆ ರಕ್ಷಿಸುವ ನಿಟ್ಟಿನಲ್ಲಿ ಆನೆ ಪಥ (ಕಾರಿಡಾರ್), ಆವಾಸಸ್ಥಾನ ರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಸಲು ತೀರ್ಮಾನಿಸಲಾಗಿದ್ದು, ಐಐಎಸ್‌ಸಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಐಐಎಸ್‌ಸಿಯ ಪ್ರೊ.ರಮನ್ ಸುಕುಮಾರ್ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಸಹಿ ಹಾಕಿ ಒಡಂಬಡಿಕೆ ವಿನಿಮಯ ಮಾಡಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಸನ, ಕೊಡಗು ಭಾಗದಲ್ಲಿ ಹೆಚ್ಚಾಗಿ ಆನೆ-ಮಾನವ ಸಂಘರ್ಷವಿದ್ದು, ಜೀವಹಾನಿ, ಬೆಳೆ ಹಾನಿ ಸಂಭವಿಸುತ್ತಿದೆ. ಇದರ ನಿಯಂತ್ರಣಕ್ಕೆ ಎಲ್ಲಾ ಸಾಧ್ಯ ಕ್ರಮಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಈ ಬಾರಿ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಪ್ರಸ್ತುತ ಮಾನವ-ಆನೆ ಸಂಘರ್ಷ ಇತರ ಪ್ರದೇಶಕ್ಕೂ ವಿಸ್ತರಿಸುತ್ತಿದ್ದು, ಪರಿಸರ ಸಂಶೋಧನೆ ಮತ್ತು ಕ್ಷೇತ್ರ ಅನುಷ್ಠಾನವನ್ನು ಸಮನ್ವಯಗೊಳಿಸುವ ಮೂಲಕ ಆನೆಪಥ, ಆವಾಸಸ್ಥಾನಗಳ ಸಂರಕ್ಷಣೆಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಏಷ್ಯನ್ ಆನೆಗಳ ಭೂಪ್ರದೇಶ ನಿರ್ವಹಣೆಗಾಗಿ 5 ವರ್ಷಗಳ ಸಹಯೋಗದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಚಿವ ರಾಮಲಿಂಗಾರೆಡ್ಡಿ

ಸ್ಯಾಟಲೈಟ್ ಟೆಲಿಮೆಟ್ರಿ, ಕ್ಯಾಮೆರಾ ಟ್ರಾಪ್‌ಗಳು ಮತ್ತು ಜಿಐಎಸ್ ಮಾದರಿಗಳನ್ನು ಬಳಸಿಕೊಂಡು ಆನೆ ಕಾರಿಡಾರ್‌ಗಳನ್ನು ಗುರುತಿಸುವುದು ಮತ್ತು ಆನೆಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆತಡೆಗಳನ್ನು ಗುರುತಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆನೆ ಲದ್ದಿಯಲ್ಲಿರುವ ಹಾರ್ಮೋನ್‌ಗಳ ಪರೀಕ್ಷೆ ನಡೆಸುವ ಮೂಲಕ ಆನೆಗಳ ದೇಹದ ಸ್ಥಿತಿ ಮತ್ತು ಒತ್ತಡ ಸೂಚಕಗಳನ್ನು ಅಂದಾಜು ಮಾಡಲಾಗುತ್ತದೆ. ಅದೇ ರೀತಿ ಬೆಳೆ ನಾಶದ ಮಾದರಿಗಳ ಅಧ್ಯಯನ, ಸಂಘರ್ಷದ ಹಾದಿ ತುಳಿದ ಆನೆಗಳ ಅಧ್ಯಯನ, ವಿಶ್ಲೇಷಣೆ ಮಾಡಿ ರೈತರಿಗೆ ಅರಿವು ಮೂಡಿಸುವುದೂ ಈ ಯೋಜನೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.

ಆನೆಗಳು ನಾಡಿನತ್ತ ಬಂದಾಗ ಮುನ್ನೆಚ್ಚರಿಕೆಯ ಗಂಟೆ ಮೊಳಗಿಸುವ ವ್ಯವಸ್ಥೆ ರೂಪಿಸುವ ಹಾಗೂ ಸ್ವಯಂ ಚಾಲಿತ ಧ್ವನಿಯಂತ್ರಗಳ ಮೂಲಕ ಆನೆಗಳನ್ನು ಹಿಮ್ಮೆಟ್ಟಿಸುವ ಬಗ್ಗೆಯೂ ಅಧ್ಯಯನ ನಡೆಸಲಾಗುವುದು. ಅರಣ್ಯ ಇಲಾಖೆ ಮತ್ತು ಭಾರತೀಯ ವಿಜ್ಞಾನ ಮಂದಿರದ ತಜ್ಞರು, ಅಧ್ಯಯನಿಗಳು ಆನೆಗಳ ವರ್ತನೆ, ಸ್ವಭಾವದ ದತ್ತಾಂಶ ಕ್ರೋಢೀಕರಿಸಿ ಆನೆಪಥ (ಕಾರಿಡಾರ್) ಹಾಗೂ ಮುಂದಿನ 10 ವರ್ಷಗಳಲ್ಲಿ ಎದುರಾಗಬಹುದಾದ ಭವಿಷ್ಯದ ಸಂಘರ್ಷ ಪ್ರದೇಶ ಗುರುತಿಸಲೂ ಈ ಅಧ್ಯಯನ ನೆರವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಷ್ಣೋಯ್ ಹೆಸರಲ್ಲಿ ಬೆದರಿಕೆ ಹಾಕಿ ಒಂದು ಕೋಟಿಗೆ ಡಿಮ್ಯಾಂಡ್ – ತಿಹಾರ್‌ ಜೈಲಲ್ಲಿ ಫ್ರೆಂಡ್ಸ್‌ ಆಗಿದ್ದ ಗ್ಯಾಂಗ್‌ ಅಂದರ್‌!

ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಅಧ್ಯಯನ:
ಮೈಸೂರು ಆನೆ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪ್ರಮುಖ ಅರಣ್ಯ ವಿಭಾಗಗಳು ಹಾಗೂ ಸಂರಕ್ಷಿತ ಪ್ರದೇಶಗಳು ಅಂದರೆ ಹುಲಿ ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಹಾಗೂ ಮಾನವ ವಾಸವಿರುವ ಕೃಷಿ ಪ್ರದೇಶಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಸಂಶೋಧನಾ ಚಟುವಟಿಕೆಗಳನ್ನು ಭಾರತೀಯ ವಿಜ್ಞಾನ ಮಂದಿರದ (IISc) ಪರಿಸರ ಶಾಸ್ತ್ರ ಕೇಂದ್ರ (Centre for Ecological Sciences) ಹಾಗೂ ಏಷಿಯನ್ ನೇಚರ್ ಕನ್ಸರ್ವೇಷನ್ ಫೌಂಡೇಶನ್, ಫೌಂಡೇಶನ್ ಫಾರ್ ಇಕಲಾಜಿಕಲ್ ರಿಸರ್ಚ್, ಅಡ್ವಕಸಿ ಅಂಡ್ ಲರ್ನಿಂಗ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

ಸ್ಥಳಾಂತರಗೊಂಡ ಆನೆಗಳಿಗಾಗಿ ಮೃದು ಬಿಡುಗಡೆ ಶಿಷ್ಟಾಚಾರ, ಝ್ಯಾಪ್ ಕಾಲರ್‌ಗಳು, ಬಜರ್‌ಗಳು ಮತ್ತು ಸಮುದಾಯ ಬೆಂಬಲಿತ ಬೇಲಿಗಳಂತಹ ನವೀನ ಉಪಕರಣಗಳ ಅಭಿವೃದ್ಧಿಗೂ ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರೊ.ರಮನ್ ಸುಕುಮಾರ್ ಮಾತನಾಡಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದು, ನಾವು ಕಾರಣಗಳನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ಒಡಂಬಡಿಕೆ ಮಹತ್ವಪೂರ್ಣವಾದುದ್ದಾಗಿದೆ. ಈ ಅಧ್ಯಯನದಿಂದ ಅಥವಾ ಯೋಜನೆಯ ಅನುಷ್ಠಾನದಿಂದ ಸಂಪೂರ್ಣವಾಗಿ ಮಾನವ-ಆನೆ ಸಂಘರ್ಷ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಪರಿಣಾಮಕಾರಿಯಾಗಿ ಸಂಘರ್ಷ ತಗ್ಗಿಸಬಹುದಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ಸೇರಿ ಹಲವರು ಉಪಸ್ಥಿತರಿದ್ದರು.

Share This Article