ಕಾದಾಟದಲ್ಲಿ `ಏಕದಂತನಾದ ಭೀಮ’ ಆರೋಗ್ಯವಾಗಿದ್ದಾನೆ – ಮಾಹಿತಿ ಹಂಚಿಕೊಂಡ ಡಿಎಫ್‍ಓ

Public TV
1 Min Read

ಹಾಸನ: ಕ್ಯಾಪ್ಟನ್ ಜೊತೆ ಕಾದಾಟದಲ್ಲಿ ದಂತ ಮುರಿದುಕೊಂಡು ನರಳಾಡುತ್ತಿರುವ ಭೀಮ (Elephant Bhima) ಆರೋಗ್ಯವಾಗಿದ್ದಾನೆ ಎಂದು ಡಿಎಫ್‍ಓ ಸೌರಭ್‍ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಡ್ರೋನ್ ವಿಡಿಯೋ, ಫೋಟೋ ಜೊತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಡ್ರೋನ್ ವಿಡಿಯೋದಲ್ಲಿ ಭೀಮ ಮೈತುಂಬಾ ಕೆಸರು ಮೆತ್ತಿಕೊಂಡು ಆರಾಮಾಗಿ ಓಡಾಡುವುದು ಸೆರೆಯಾಗಿದೆ. ಮೂರು ದಿನಗಳ ಹಿಂದೆ ಸ್ಥಳೀಯವಾಗಿ ಭೀಮ ಎಂದು ಕರೆಯಲ್ಪಡುವ ಗಂಡು ಕಾಡಾನೆ ಮತ್ತೊಂದು ಕಾಡಾನೆಯೊಂದಿಗೆ ಕಾಳಗ ನಡೆಸುವ ವೇಳೆ ಎಡ ಬದಿಯ ದಂತ ಮುರಿದು ಬಿದ್ದು ಗಾಯಗೊಂಡಿತ್ತು. ಈ ಕಾಡಾನೆಯನ್ನು ಪರಿಶೀಲಿಸಿದ್ದು ಕಾಡಾನೆಯು ಆರೋಗ್ಯಕರವಾಗಿದೆ. ನೀರನ್ನು ಕುಡಿಯುತ್ತಿರುವುದು ಮತ್ತು ಹುಲ್ಲು ಹಾಗೂ ಇತರೆ ಮೇವನ್ನು ತಿನ್ನುತ್ತಿರುವುದನ್ನು ಗಮನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ನಾಪತ್ತೆ – ರಾತ್ರಿಯಿಡಿ ಹುಡುಕಿದ್ರೂ ಸುಳಿವಿಲ್ಲ

ಕಾಡಾನೆಯು ಕೆಸರು ಮಣ್ಣನ್ನು ಮೈ ಮೇಲೆ ಹಾಕಿಕೊಂಡು ಓಡಾಡಿಕೊಂಡಿದ್ದು ಆರೋಗ್ಯಕರವಾಗಿದೆ. ಈ ಕಾಡಾನೆಯು ಕಾಳಗದ ನಂತರ ಬೇಲೂರು (Beluru) ತಾಲೂಕಿನ ಬಿಕ್ಕೋಡು ಭಾಗದಿಂದ ಸಕಲೇಶಪುರ ತಾಲೂಕಿನ, ಉದೇವಾರ ಭಾಗಕ್ಕೆ ತೆರಳಿ ಪುನಃ ಬೇಲೂರಿನ ಬಿಕ್ಕೋಡು ಭಾಗಕ್ಕೆ ಬಂದಿದೆ. ಪ್ರಸ್ತುತ ಬಿಕ್ಕೋಡು ಬಳಿಯ ಬಕ್ರವಳ್ಳಿ, ಕಿತ್ತಗೆರೆ ಭಾಗದಲ್ಲಿ ಇದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭೀಮನ ಆರೋಗ್ಯದ ಬಗ್ಗೆ ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಸಂದೇಶಗಳನ್ನು ನಂಬಬಾರದು. ಇಲಾಖಾ ಅನುಮತಿ ಪಡೆಯದೆ ವನ್ಯಜೀವಿಗಳ ಬಳಿ ತೆರಳಿ ಛಾಯಾಚಿತ್ರ ತೆಗೆಯುವುದು, ವೀಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭೀಮಾ v/s ಕ್ಯಾಪ್ಟನ್ ಫೈಟ್ – ಕಾಳಗದಲ್ಲಿ ಒಂದು ದಂತ ಕಳೆದುಕೊಂಡ ಭೀಮಾ

Share This Article