ಕೋಟ್ಯಂತರ ರೂಪಾಯಿ ವಿದ್ಯುತ್‌ ಬಿಲ್‌ ಬಾಕಿ – ಎತ್ತಿನಹೊಳೆ ಯೋಜನೆ ಮುಖ್ಯ ಕಚೇರಿ ಕರೆಂಟ್‌ ಕಟ್‌

1 Min Read

ಹಾಸನ: ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ (Electricity Bill) ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಸಕಲೇಶಪುರದ (Sakleshpura) ಎತ್ತಿನಹೊಳೆ ಯೋಜನೆ (Ettina Hole Project) ಮುಖ್ಯ ಕಚೇರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

2024 ರಲ್ಲಿ ಸುಮಾರು 1.5 ಟಿಎಂಸಿ ನೀರು ಎತ್ತಿನಹೊಳೆಯಿಂದ ಹರಿದಿದ್ದು ಇದಕ್ಕಾಗಿ 14 ಮೆಗವ್ಯಾಟ್ ವಿದ್ಯುತ್ ಬಳಕೆ ಮಾಡಲಾಗಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ಜಲ ನಿಗಮ ಅಂದಾಜು 52 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಬೇಕಿದೆ. 2025 ರಲ್ಲಿ ಎತ್ತಿನಹೊಳೆಯಿಂದ ಹೇಮಾವತಿ ನದಿಗೆ ಸುಮಾರು 2 ಟಿಎಂಸಿ ಹಾಗೂ ಇತರೆ ಕೆರೆಗಳಿಗೆ 0.3 ಟಿಎಂಸಿ ನೀರು ಹರಿಸಲಾಗಿದ್ದು ಇದಕ್ಕಾಗಿ ಒಟ್ಟು 18.25 ಮೆಗವ್ಯಾಟ್ ವಿದ್ಯುತ್ ಬಳಕೆ ಮಾಡಿಕೊಳ್ಳಲಾಗಿದೆ. ಒಟ್ಟು 223 ಕೋಟಿ ರೂ. ವಿದ್ಯುತ್ ಬಿಲ್‍ನ್ನು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆ ಪಾಲಿಕೆ ಇ ಸ್ವತ್ತು ಸಾಫ್ಟ್‌ವೇರ್ ಹ್ಯಾಕ್‌ – ಹಲವು ಸ್ವತ್ತುಗಳಿಗೆ ಅಕ್ರಮ ಅನುಮೋದನೆ

ಪ್ರತಿ ತಿಂಗಳು 9 ರಿಂದ 10 ಕೋಟಿ ರೂ. ಕನಿಷ್ಠ ವಿದ್ಯುತ್ ಬಿಲ್ ಪಾವತಿ ಮಾಡಬೇಕಿರುವ ವಿಶ್ವೇಶ್ವರಯ್ಯ ಜಲ ನಿಗಮ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಹಿನ್ನಲೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಹಣ ಪಾವತಿಸದ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯುತ್ ಸಂಪರ್ಕ ಕಡಿತದಿಂದ ಕಚೇರಿಯ ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದ್ದು, ಕಂಪ್ಯೂಟರ್‌ಗಳು, ಆನ್‍ಲೈನ್ ವರದಿ ಸಲ್ಲಿಕೆ, ಅಧಿಕಾರಿಗಳ ಸಭೆ, ಸೇರಿದಂತೆ ಆಡಳಿತಾತ್ಮಕ ಕಾರ್ಯಗಳಿಗೆ ಜನರೇಟರ್ ಬಳಸಲಾಗುತ್ತಿದೆ.

2024ರ ಸೆಪ್ಟೆಂಬರ್ ತಿಂಗಳಿನಲ್ಲಿ ಎತ್ತಿನಹೊಳೆ ಯೋಜನೆ ನೀರೆತ್ತುವ ಕಾರ್ಯಕ್ಕೆ ಸಿಎಂ-ಡಿಸಿಎಂ ಚಾಲನೆ ನೀಡಿದ್ದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಎತ್ತಿನಹೊಳೆ ಯೋಜನೆಯಿಂದ ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಜಿಲ್ಲೆಗಳ 6,657 ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದನ್ನೂ ಓದಿ: ಬೆಳಗಾವಿ ಬಾಯ್ಲರ್ ಸ್ಫೋಟ ಕೇಸ್‌ – ಮೃತ 8 ಕಾರ್ಮಿಕರ ಪೈಕಿ ಓರ್ವನಿಗೆ ಪರಿಹಾರ ಘೋಷಣೆ

Share This Article