ನವದೆಹಲಿ: ಎಲೆಕ್ಟ್ರಿಕ್ ಕಾರು (Electric Car) ಮಾರುಕಟ್ಟೆಯಲ್ಲಿ ಜೆಎಸ್‍ಡಬ್ಲ್ಯೂ ಎಂಜಿ ಮೋಟಾರ್ (JSW MG Motor) ಹಿಂದಿಕ್ಕಿ ಮಹೀಂದ್ರಾ ಇದೇ ಮೊದಲ ಬಾರಿಗೆ ಎರಡನೇ ಸ್ಥಾನವನ್ನು ಪಡೆದಿದೆ. ಟಾಟಾ ಮೋಟಾರ್ಸ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಭಾರತ ಸರ್ಕಾರದ ವಾಹನ್ ಪೋರ್ಟಲ್‌ನಲ್ಲಿ ಮಾರ್ಚ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ (Tata Motors) ಒಟ್ಟು 8,224 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಈ ಅವಧಿಗೆ ಹೋಲಿಸಿದರೆ 65% ರಷ್ಟು ಬೆಳವಣಿಗೆಯಾಗಿದೆ. Nexon EV ಮತ್ತು Punch EV ಕಾರುಗಳು ಹೆಚ್ಚು ಮಾರಾಟವಾಗಿವೆ.

ಮಹೀಂದ್ರಾ(Mahindra & Mahindra) ಈ ತಿಂಗಳು ಭಾರೀ ಜಿಗಿತ ಕಂಡು 5,217 ಕಾರುಗಳ ಮಾರಾಟದೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ. XUV400 ಜೊತೆಗೆ ಹೊಸದಾಗಿ ಬಿಡುಗಡೆಯಾದ XEV 9e ಮತ್ತು BE 6 ಮಾಡೆಲ್‌ಗಳು ಮಾರಾಟದ ಏರಿಕೆಗೆ ಕಾರಣವಾಗಿವೆ.
ಸಂಪೂರ್ಣವಾಗಿ ವಿದ್ಯುತ್‌ನಿಂದ ಚಲಿಸುವ SUV ಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ 12 ತಿಂಗಳೊಳಗೆ ಮಹೀಂದ್ರಾ ಎರಡನೇ ಸ್ಥಾನಕ್ಕೆ ಜಿಗಿದಿರುವುದು ವಿಶೇಷ. ಹೊಸ ಮಾಡೆಲ್ ಕಾರುಗಳ ಬಿಡುಗಡೆಯಿಂದ ಕಳೆದ ವರ್ಷಕ್ಕೆ ಹೋಲಿಸಿದರೆ 141% ಬೆಳವಣಿಗೆ ಸಾಧಿಸಿದೆ. ಮಾರ್ಚ್ 2025 ರಲ್ಲಿ 2,166 ಕಾರು ಮಾರಾಟಗೊಂಡಿದ್ದರೆ ಈ ಬಾರಿ 5,217 ಕಾರು ಮಾರಾಟವಾಗುವ ಮೂಲಕ ಅದರ ಮಾರುಕಟ್ಟೆ ಪಾಲು 7.8% ರಿಂದ 21.2% ಕ್ಕೆ ಏರಿಕೆಯಾಗಿದೆ.

ಎಂಜಿ ಮೋಟಾರ್ 5,113 ಯುನಿಟ್‌ಗಳನ್ನು ಮಾರಾಟ ಮಾಡಿ ಮೂರನೇ ಸ್ಥಾನದಲ್ಲಿದೆ. Windsor EV, ZS EV ಮತ್ತು Comet EV ಕಾರುಗಳು ಹೆಚ್ಚು ಮಾರಾಟವಾಗಿವೆ. ಮರ್ಸಿಡಿಸ್ ಬೆಂಝ್ (Mercedes-Benz: ಐಷಾರಾಮಿ ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ ಮಾರ್ಚ್ ತಿಂಗಳಲ್ಲಿ 65 ಕಾರುಗಳನ್ನು ಮಾರಾಟ ಮಾಡಿದೆ.
ಕಿಯಾ (Kia) 940, ಹೊಸದಾಗಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಮಾರುತಿ ಸುಜುಕಿ (Maruti Suzuki) 940, ಬಿವೈಡಿ (BYD) 387 ಕಾರುಗಳನ್ನು ಮಾರಾಟ ಮಾಡಿದೆ.
ಈ ತಿಂಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬೆಲೆ ಏರಿಕೆಯ ಭೀತಿ ಮತ್ತು ವಿವಿಧ ಡಿಸ್ಕೌಂಟ್‌ಗಳಿಂದಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇವಿಗಳನ್ನು ಖರೀದಿಸಿರುವ ಸಾಧ್ಯತೆಯಿದೆ.

