ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು: ಮೋದಿ

Public TV
2 Min Read

ನವದೆಹಲಿ: ತೆಲಂಗಾಣದೊಂದಿಗಿನ (Telangana) ನಮ್ಮ ಬಾಂಧವ್ಯ ಮುರಿಯಲಾಗದು. ಕಳೆದ ಕೆಲವು ವರ್ಷಗಳಿಂದ ಈ ಬೆಂಬಲವು ಹೆಚ್ಚುತ್ತಿದೆ. ನಾವು ತೆಲಂಗಾಣ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತೆಲಂಗಾಣ ಚುನಾವಣೆಯಲ್ಲಿ ಸೋಲಿನ ಬಳಿಕವೂ ಎಕ್ಸ್‌ನಲ್ಲಿ ಬರೆದು ಧನ್ಯವಾದ ತಿಳಿಸಿದ್ದಾರೆ.

ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಬಿಜೆಪಿಗೆ (BJP) ಅಲ್ಲಿನ ಜನತೆ ನೀಡಿರುವ ಬೆಂಬಲ ಎದ್ದು ಕಾಣಿಸಿದೆ. ಈ ಹಿನ್ನೆಲೆ ಎಕ್ಸ್‌ನಲ್ಲಿ ಬರೆದಿರುವ ನರೇಂದ್ರ ಮೋದಿ ಪಂಚರಾಜ್ಯ ಚುನಾವಣೆಗೆ ಶ್ರಮಿಸಿದ ಕಾರ್ಯಕರ್ತರು ಸೇರಿದಂತೆ ತೆಲಂಗಾಣದಲ್ಲಿ ಬೆಂಬಲ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?
ಜನತಾ ಜನಾರ್ದನರಿಗೆ ನಮಿಸುತ್ತೇವೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಫಲಿತಾಂಶಗಳಲ್ಲಿ ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದೊಂದಿಗೆ ದೃಢವಾಗಿ ನಿಂತಿದ್ದಾರೆ. ಈ ರಾಜ್ಯಗಳ ಜನರಿಗೆ ಅವರ ಅಚಲ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರ ಯೋಗಕ್ಷೇಮಕ್ಕಾಗಿ ನಾವು ದಣಿವರಿಯದೆ ಶ್ರಮಿಸುತ್ತೇವೆ ಎಂದು ಭರವಸೆ ನೀಡುತ್ತೇನೆ. ಇದನ್ನೂ ಓದಿ: ಲೋಕ ಸಮರಕ್ಕೆ ಬೂಸ್ಟ್‌ – ಸೆಮಿಫೈನಲ್‌ ಗೆದ್ದ ಮೋದಿ

ಚುನಾವಣೆಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ವಿಶೇಷವಾದ ಧನ್ಯವಾದಗಳು. ಅವರ ಪ್ರತಿಯೊಂದು ಕೆಲಸ ಅನುಕರಣೀಯ. ದಣಿವರಿಯದೆ ಕೆಲಸ ಮಾಡಿ ನಮ್ಮ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸಿದ್ದಾರೆ.

ನನ್ನ ಪ್ರೀತಿಯ ತೆಲಂಗಾಣದ ಸಹೋದರ, ಸಹೋದರಿಯರೇ, ಬಿಜೆಪಿಗೆ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ ಈ ಬೆಂಬಲವು ಹೆಚ್ಚುತ್ತಿದೆ. ಈ ಪ್ರವೃತ್ತಿಯು ಮುಂಬರುವ ಸಮಯದಲ್ಲೂ ಮುಂದುವರಿಯುತ್ತದೆ. ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು. ನಾವು ತೆಲಂಗಾಣ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಶ್ರಮ ಮತ್ತು ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್‌ ಶಾಕ್‌

Share This Article