ಮುಸ್ಲಿಮರಿಗೆ ಉದ್ಯೋಗ ಬೇಕಾದ್ರೆ ಮತ ನೀಡಿ: ಮನೇಕಾ ಗಾಂಧಿ ಹೇಳಿಕೆಗೆ ನೋಟಿಸ್

Public TV
1 Min Read

ಲಕ್ನೋ: ನಾನು ಈಗಾಗಲೇ ಚುನಾವಣೆಯನ್ನು ಗೆದ್ದಿದ್ದೇನೆ. ಹಾಗಾಗಿ ಉದ್ಯೋಗ ಬೇಕಾದರೆ ಮುಸ್ಲಿಮರು ನನಗೆ ಮತ ನೀಡಿ ಎಂದು ಕೇಂದ್ರ ಸಚಿವೆ, ಸುಲ್ತಾನಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಚುನಾವಣಾ ಆಯೋಗ ಸ್ಪಷ್ಟನೆ ಕೇಳಿದ್ದು, ಮೂರು ದಿನಗಳಲ್ಲಿ ಉತ್ತರಿಸಬೇಕೆಂದು ಸೂಚಿಸಿದೆ.

ಅತ್ಯಧಿಕ ಮುಸ್ಲಿಂ ಸಮುದಾಯದ ಜನರು ವಾಸವಾಗಿರುವ ಗೌರಬಾರಿಕ್ ಗ್ರಾಮದಲ್ಲಿ ಮಾತನಾಡಿದ ಮನೇಕಾ ಗಾಂಧಿ, ಚುನಾವಣೆಯಲ್ಲಿ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಗೆಲ್ಲುತ್ತಿದ್ದೇನೆ. ಆದ್ರೆ ಮುಸ್ಲಿಮರ ಮತಗಳ ಹೊರತಾಗಿ ನಾನು ಜಯ ಸಾಧಿಸುತ್ತೇನೆ. ಮುಸ್ಲಿಂ ಸಮುದಾಯದ ಮತ ಪಡೆಯದೇ ಜಯ ಸಾಧಿಸಲು ನನಗೆ ಇಷ್ಟವಿಲ್ಲ. ಗೆದ್ದ ಮೇಲೆ ಕೆಲಸ ಕೇಳಿಕೊಂಡು ಮುಸ್ಲಿಮರು ಬಂದಾಗ ನಾನು ನೂರು ಬಾರಿ ಯೋಚಿಸಿ ಉದ್ಯೋಗ ನೀಡೋದು ಬೇಡ ಎಂದು ನಿರ್ಧರಿಸಬೇಕಾಗುತ್ತದೆ. ಮತದ ಬದಲಾಗಿ ಉದ್ಯೋಗ ನೀಡೋದು ವ್ಯವಹಾರ ಎಂದು ಮುಸ್ಲಿಮರು ತಿಳಿದುಕೊಳ್ಳಬೇಕಿದೆ. ನಾವೇನು ಮಹಾತ್ಮ ಗಾಂಧೀಜಿಯ ಕುಟುಂಬಸ್ಥರು ಅಲ್ಲ. ಕೇವಲ ಕೊಡುವುದು ಗೊತ್ತಿಲ್ಲ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ನಮಗೆ ಮತ ನೀಡಬೇಕೆಂದು ಹೇಳಿದ್ದಾರೆ.

ಕಳೆದ ಬಾರಿ ಗೆಲುವು ಸಾಧಿಸಿದ ಪೀಲಿಬೀತ್ ಕ್ಷೇತ್ರದ ಜನರಿಗೆ ಫೋನ್ ಮಾಡಿ ನನ್ನ ಕಾರ್ಯ ವೈಖರಿಯ ಬಗ್ಗೆ ವಿಚಾರಿಸಿ. ಅಲ್ಲಿ ಕೆಲಸ ಮಾಡಿಲ್ಲ ಎಂದು ಹೇಳಿದರೆ ನನಗೆ ಮತ ಹಾಕಬೇಡಿ. ಚುನಾವಣೆಯಲ್ಲಿ ನಾನು ಗೆಲ್ಲುತ್ತಿದ್ದು, ನಿಮ್ಮ ಅಗತ್ಯ ನನಗಿಲ್ಲ. ಇದೀಗ ನಿಮಗೆ ನನ್ನ ಅಗತ್ಯವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮನೇಕಾ ಗಾಂಧಿ ಅವರ ಹೇಳಿಕೆಯನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ನಿಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕೆಂದು ಸೂಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮುಸ್ಲಿಂ ಕಾಂಗ್ರೆಸ್, ಮನೇಕಾರ ಹೇಳಿಕೆ ಖಂಡಿಸಿ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದೆ. ಈ ರೀತಿ ದುರಾಲೋಚನೆಯ ಹೇಳಿಕೆಯಿಂದ ಸಮುದಾಯಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಮನೇಕಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದೆ.

Share This Article
Leave a Comment

Leave a Reply

Your email address will not be published. Required fields are marked *