ಮತಯಂತ್ರಗಳನ್ನು ಖಾಸಗಿ ಕಂಪೆನಿಯಿಂದ ಖರೀದಿಸಲ್ಲ: ಕೇಂದ್ರ ಚುನಾವಣಾ ಆಯೋಗ

Public TV
1 Min Read

ನವದೆಹಲಿ: ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಯಂತ್ರವನ್ನು ಖಾಸಗಿ ಕಂಪೆನಿಗಳಿಂದ ಖರೀದಿಸುವ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ.

ಖಾಸಗಿ ಕಂಪೆನಿಗಳಿಂದ ಖರೀದಿಸಿದರೆ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆಯೋಗ ಆರ್ ಟಿ ಐ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ.

ಖಾಸಗಿ ಕಂಪೆನಿಗಳು ವಿವಿಪ್ಯಾಟ್ ನ ಸುರಕ್ಷತಾ ಕ್ರಮಗಳನ್ನು ಹೇಗೆ ಅಳವಡಿಸುತ್ತವೆ ಅನ್ನುವುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಇದರಿಂದ ಮತದಾರರ ನಂಬಿಕೆ ತಗ್ಗಲಿದೆ ಎಂದು ಆಯೋಗದ ತಾಂತ್ರಿಕ ತಜ್ಞ ಸಮಿತಿ (ಟಿಇಸಿ) ವಾದಿಸಿದೆ.

ಸುಪ್ರಿಂ ಕೋರ್ಟ್ ಚುನಾವಣಾ ಆಯೋಗದ ನಿರ್ಧಾರವನ್ನು ಸಮ್ಮತಿಸಿದೆ. ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕಂಪೆನಿಗಳು ಸದ್ಯಕ್ಕೆ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ತಯಾರಿಸುತ್ತಿವೆ.

ಇತ್ತೀಚೆಗಷ್ಟೆ ಮತಯಂತ್ರಗಳ ಮೇಲೆ ಎಎಪಿ ಮತ್ತು ಬಿಎಸ್‍ಪಿ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇದಾದ ನಂತರ ಕೇಂದ್ರ ಚುನಾವಣಾ ಆಯೋಗವು ಮತಯಂತ್ರಗಳನ್ನು ಪರೀಕ್ಷೆಗೆ ಒಳಪಡಿಸಿ ಎಲ್ಲಾ ಪಕ್ಷಗಳಿಗೆ ಅಕ್ರಮ ಸಾಬೀತು ಮಾಡಲು ಅವಕಾಶ ಕಲ್ಪಿಸಿತ್ತು. ಯಾವ ಪಕ್ಷದವರು ಕೂಡ ಸಾಬೀತು ಮಾಡಿಲ್ಲ.

ವಿವಿಪಿಎಟಿ ಅಂದ್ರೇನು?: ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ವ್ಯವಸ್ಥೆಯಲ್ಲಿ ಯಾರಿಗೆ ವೋಟ್ ಬಿದ್ದಿದೆ ಎನ್ನುವುದನ್ನು ತಿಳಿದುಕೊಳ್ಳಲು ವೋಟ್ ಹಾಕಿದ ಬಳಿಕ ಅಭ್ಯರ್ಥಿಯ ಚಿಹ್ನೆ 7 ಸೆಕೆಂಡ್ ಕಾಲ ಪರದೆಯಲ್ಲಿ ಕಾಣುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ 2016ರಲ್ಲಿ ಸಲಹೆ ನೀಡಿತ್ತು. ಪ್ರಸ್ತುತ ಈ ಬಾರಿ ಎಲ್ಲ ಮತದಾನ ಕೇಂದ್ರಗಳಲ್ಲಿ ವಿವಿಪ್ಯಾಟ್ ಇರಲಿದೆ.

Share This Article
Leave a Comment

Leave a Reply

Your email address will not be published. Required fields are marked *