ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

Public TV
1 Min Read

ಮಡಿಕೇರಿ: ತನ್ನ ಆಚಾರ, ವಿಚಾರ, ಪದ್ಧತಿ ಪರಂಪರೆಯಿಂದ ಪ್ರಸಿದ್ಧಯಾಗಿರುವ ಕೊಡಗಿನ ಜನತೆಯ ಮದುವೆ ಸಮಾರಂಭಕ್ಕೆ ನೀತಿಸಂಹಿತೆ ತಟ್ಟಿದೆ.

ಸದ್ಯ ವಿವಾಹವಾಗಲು ಚೈತ್ರಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಆದರೆ ಹೀಗೆ ನಡೆಯುತ್ತಿರುವ ಮದುವೆಗಳಿಗೆ ಒಂದು ರೀತಿಯ ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಪ್ರತಿ ಮದುವೆ ಶುಭ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಕೊಡಗಿನ ಜನರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಅಬಕಾರಿ ಇಲಾಖೆಯಿಂದ ಕಲ್ಯಾಣ ಮಂಟಪಗಳಿಗೆ ಲಿಖಿತ ನೋಟಿಸ್ ಜಾರಿಗೊಳಿಸಿದ್ದು, ಕಲ್ಯಾಣ ಮಂಟಪ ಅಥವಾ ಶುಭ ಸಮಾರಂಭ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡದಂತೆಯೂ, ಮದ್ಯ ಸಂಗ್ರಹ ಮಾಡಿ ಇಟ್ಟುಕೊಳ್ಳದಂತೆಯೂ ನಿರ್ದೇಶಿಸಿದೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಿಕ್ಕೇರಿಸಿಕೊಳ್ಳುತ್ತಿದ್ದ ಮಂದಿ ಈ ನಿಯಮದಿಂದ ತುಂಬಾನೇ ಬೇಸರ ಮಾಡಿಕೊಳ್ಳುವಂತಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ವೀರಣ್ಣ ಹೇಳಿದ್ದಾರೆ.

ಚುನಾವಣೆ ನೀತಿ ಸಂಹಿತೆ ನಡುವೆಯೂ ಮದ್ಯ ಬಳಕೆಗೆ ಅವಕಾಶ ಬೇಕು ಎಂದ್ರೆ ಒಂದು ದಿನಕ್ಕೆ 11,500ರೂ ಹಣ ಸಂದಾಯ ಮಾಡಿ ಪರವಾನಿಗೆ ಪಡೆಯಬೇಕು ಎಂದು ಆದೇಶ ಮಾಡಲಾಗಿದೆ. ಈ ಮೊತ್ತ ಸರ್ಕಾರಕ್ಕೆ ಜಮೆಯಾಗಲಿದ್ದು, ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಚುನಾವಣೆ ಘೋಷಣೆಗೆ ಮುನ್ನವೇ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿವಾಹ ಸಮಾರಂಭಗಳು ನಿಶ್ಚಯ ಆಗಿವೆ.

ಸಾಮಾನ್ಯವಾಗಿ ಮದುವೆಯ ಮುನ್ನ ದಿನವಾದ ಚಪ್ಪರ ಹಾಗೂ ಮದುವೆ ದಿನ ಮದ್ಯವನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಹೀಗಾಗಿ ಸದ್ಯ 2 ದಿನಕ್ಕೆ ಪರವಾನಿಗೆ ಬೇಕು ಅಂದ್ರೆ 23 ಸಾವಿರ ಹಣವನ್ನ ಅಬಕಾರಿ ಇಲಾಖೆಗೆ ಕಟ್ಟಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮದುವೆ ಮಂಟಪಗಳ ಬಾಡಿಗೆ ಹಾಗೂ ಇತರ ಖರ್ಚು ವೆಚ್ಚಗಳನ್ನು ಭರಿಸಿ ಶುಭ ಸಮಾರಂಭಗಳನ್ನು ನೆರವೇರಿಸಲು ಸಾಮಾನ್ಯ ಕುಟುಂಬಗಳು ಬವಣೆ ಪಡುತ್ತಿರುವಾಗ, ಹೆಚ್ಚುವರಿ ಸುಮಾರು 25 ಸಾವಿರ ಹಣವನ್ನ ಪಾವತಿಸುವುದು ನಮಗೆ ಕಷ್ಟವಾಗುತ್ತಿದೆ ಎಂದು ಸ್ಥಳೀಯ ನವೀನ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *