ದೆಹಲಿಯಲ್ಲಿ ವೃದ್ಧದಂಪತಿಯ ಹತ್ಯೆ – ಮನೆಕೆಲಸದವರ ಸಹಕಾರದಿಂದಲೇ ಕೊಲೆ ಶಂಕೆ

By
1 Min Read

– ಹತ್ಯೆ ನಡೆದ ದಿನದಿಂದ ಮನೆ ಕೆಲಸದವರು ಮಿಸ್ಸಿಂಗ್

ನವದೆಹಲಿ: ಇಲ್ಲಿನ ಪಿತಾಂಪುರದಲ್ಲಿರುವ (Pitampura) ಕೊಹತ್ ಎನ್‌ಕ್ಲೇವ್ (Kohat Enclave) ಎಂಬಲ್ಲಿ ವೃದ್ಧದಂಪತಿ ಹತ್ಯೆಯಾಗಿದ್ದು, ಮಂಗಳವಾರ ಬೆಳಗ್ಗೆ ಮಗ ತಂದೆ-ತಾಯಿಯನ್ನು ಭೇಟಿಯಾಗಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಮೃತ ವೃದ್ಧ ದಂಪತಿಯನ್ನು 70 ವರ್ಷದ ಮೊಹಿಂದರ್ ಸಿಂಗ್ ಹಾಗೂ ದಿಲ್‌ರಾಜ್ ಕೌರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಸಂಜನಾ ಆನಂದ್ ಜೊತೆಗಿನ 2ನೇ ಮದುವೆ ವದಂತಿಗೆ ತೆರೆ ಎಳೆದ ಚಂದನ್‌ ಶೆಟ್ಟಿ

ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಮಾಹಿತಿ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮನೆಯ ಮೂರನೇ ಮಹಡಿಯಲ್ಲಿ ವೃದ್ಧ ದಂಪತಿಯ ಮೃತದೇಹ ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿದ್ದು, 2-3 ದಿನಗಳ ಹಿಂದೆಯೇ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ವೃದ್ಧ ದಂಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಮನೆಯಲ್ಲಿ ವೃದ್ಧ ದಂಪತಿಯೊಂದಿಗೆ ಮನೆಕೆಲಸದವರು ವಾಸಿಸುತ್ತಿದ್ದರು. ಆದರೆ ಕೊಲೆಯಾದಾಗಿನಿಂದ ಕೆಲಸದವರು ನಾಪತ್ತೆಯಾಗಿದ್ದಾರೆ. ಹೀಗಾಗಿ ಅವರನ್ನು ಪ್ರಕರಣದ ಪ್ರಮುಖ ಶಂಕಿತ ವ್ಯಕ್ತಿ ಎನ್ನಲಾಗಿದೆ. ಸದ್ಯ ಮನೆಕೆಲಸದವರ ಪತ್ತೆಗಾಗಿ ಘಟನಾ ಸ್ಥಳ ಹಾಗೂ ಅದರ ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ವಿಧಿವಿಜ್ಞಾನ ತಂಡಗಳು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ದರೋಡೆ ಮಾಡುವ ಉದ್ದೇಶದಿಂದಲೂ ಈ ಕೊಲೆ ಮಾಡಿರಬಹುದು ಎನ್ನಲಾಗಿದ್ದು, ತನಿಖೆ ಬಳಿಕ ಸಂಪೂರ್ಣ ಮಾಹಿತಿ ಹೊರಬರಲಿದೆ.ಇದನ್ನೂ ಓದಿ: ಮೋದಿ ಬಳಿ ಉದ್ಧವ್‌ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಎಂದಿದ್ರು: ಏಕನಾಥ್‌ ಶಿಂಧೆ

Share This Article