ಬಿಜೆಪಿ `ಮಹಾ’ ಮಾಸ್ಟರ್ ಪ್ಲಾನ್ – ಅಂದು ಅಟೋ ಡ್ರೈವರ್‌ ಇಂದು ಚೀಫ್‌ ಮಿನಿಸ್ಟರ್‌

Public TV
2 Min Read

ಮುಂಬೈ: ಮಹಾರಾಷ್ಟ್ರ ರಾಜಕೀಯಕ್ಕೆ ಬಿಜೆಪಿ ಬಿಗ್ ಟ್ವಿಸ್ಟ್ ನೀಡಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಯಾರೂ ಊಹೆ ಮಾಡದ ರೀತಿಯಲ್ಲಿ ದಾಳ ಉರುಳಿಸಿದೆ. ಶಿವಸೇನೆ ರೆಬಲ್ ನಾಯಕ, ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿದ್ದ ಶಿವಸೈನಿಕ ಏಕನಾಥ್ ಶಿಂಧೆಯನ್ನು ಸಿಎಂ ಸ್ಥಾನದಲ್ಲಿ ಪ್ರತಿಷ್ಠಾಪಿಸಿದೆ.

ಶಿವಸೇನೆ ಸ್ಥಾಪಕ ಬಾಳಾ ಠಾಕ್ರೆ ಹೆಸರಲ್ಲಿ ಶಿಂಧೆ ಪ್ರಮಾಣ ಸ್ವೀಕರಿಸಿದ್ದಾರೆ. ಈ ಮೂಲಕ ನಿರ್ಗಮಿತ ಸಿಎಂ ಉದ್ಧವ್‍ಠಾಕ್ರೆಗೆ ಬಿಜೆಪಿ ಮತ್ತು ಶಿಂಧೆ ಬಣ ಬಿಗ್ ಶಾಕ್ ನೀಡಿದೆ. ಎಲ್ಲರೂ, ಸಿಎಂ ಆಗ್ತಾರೆ ಎಂದು ಭಾವಿಸಿದ್ದ ದೇವೇಂದ್ರ ಫಡ್ನವೀಸ್ ಡಿಸಿಎಂ ಆಗಿದ್ದಾರೆ. ಮೊದಲು ಸರ್ಕಾರದಿಂದ ಹೊರಗೆ ಉಳಿಯಲು ಬಯಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಒತ್ತಾಸೆ ಮೇರೆಗೆ ಫಡ್ನವೀಸ್ ಸರ್ಕಾರದ ಭಾಗವಾಗಿದ್ದಾರೆ.

ಮೂರ್ನಾಲ್ಕು ದಿನದಲ್ಲಿ ನೂತನ ಸಚಿವರ ಪ್ರಮಾಣವಚನ ನಡೆಯುವ ಸಂಭವ ಇದೆ. ಶಿಂಧೆ ಸೇನೆಗೆ ಎಷ್ಟು ಸ್ಥಾನ, ಬಿಜೆಪಿಗೆ ಎಷ್ಟು ಸ್ಥಾನ, ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಂಜೆ 4:30ಕ್ಕೆ ಏಕನಾಥ್‍ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕುದಾರಿಕೆ ಮಂಡಿಸಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.  ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: 107 ನಾಮಪತ್ರ ತಿರಸ್ಕೃತ, ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಲ್ಲಿ ಪೈಪೋಟಿ

2019ರಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಮಹಾರಾಷ್ಟ್ರದ ಜನತೆ ವೋಟ್ ಮಾಡಿದ್ದರು. ಆದರೆ ಹಿಂದುತ್ವ ಮತ್ತು ಸಾವರ್ಕರ್ ಸಿದ್ದಾಂತಕ್ಕೆ ವಿರುದ್ಧವಾಗಿ ಉದ್ಧವ್ ಠಾಕ್ರೆ, ಕಾಂಗ್ರೆಸ್-ಎನ್‍ಸಿಪಿ ಜೊತೆ ಮೈತ್ರಿ ಮಾಡಿಕೊಂಡರು. ಇದು ಜನಾದೇಶಕ್ಕೆ ವಿರುದ್ಧವಾಗಿತ್ತು. ಈಗ ಶಿವಸೈನಿಕರು ನಮ್ಮ ಜೊತೆ ಬಂದಿದ್ದಾರೆ. ಬಾಳಾ ಸಾಹೇಬ್ ಠಾಕ್ರೆಯ ಹಿಂದುತ್ವದ ಆಶಯಗಳಿಗೆ ತಕ್ಕಂತೆ ಏಕನಾಥ್ ಶಿಂಧೆ ಸಿಎಂ ಆಗಲಿದ್ದಾರೆ. ಅವರ ಸರ್ಕಾರಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಇರಲಿದೆ ಎಂದು ದೇವೇಂದ್ರ ಫಡ್ನವೀಸ್ ಘೋಷಿಸಿದರು. ಇದಕ್ಕೆ ಏಕನಾಥ್ ಶಿಂಧೆ ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ, ಅಮಿತ್ ಷಾಗೆ ಧನ್ಯವಾದ ಹೇಳಿದ್ರು. ಬಾಳಾಸಾಹೇಬರ ಹಿಂದುತ್ವದ ಸಿದ್ದಾಂತಡಿಯಲ್ಲಿ ಸರ್ಕಾರ ನಡೆಸುವ ಭರವಸೆಯನ್ನು ಶಿಂಧೆ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಮುಂಬೈನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಬಿಜೆಪಿ `ಮಹಾ’ ಮಾಸ್ಟರ್ ಪ್ಲಾನ್
* `ಆಪರೇಷನ್ ಕಮಲ’ದ ಕಳಂಕದಿಂದ ದೂರ
* ನಮಗೆ ಅಧಿಕಾರ ಮುಖ್ಯ ಅಲ್ಲ.. ಹಿಂದುತ್ವವೇ ಮುಖ್ಯ
* ಶಿವಸೇನೆಗೆ ಅನುಕಂಪದ ಅಲೆ ತಪ್ಪಿಸಲು
* ಬಂಡಾಯ ನಾಯಕರಿಗೆ ಸರ್ಕಾರದ ಜವಾಬ್ದಾರಿ
* ಇಲ್ಲಿ ಶಿಂಧೆಗೆ ಅಧಿಕಾರ.. ಜಾರ್ಖಂಡ್‌ನಲ್ಲಿ ಸೋರೆನ್‍ಗೆ ಸಂದೇಶ.

ಆಟೋ ಡ್ರೈವರ್ ಟು ಚೀಫ್ ಮಿನಿಸ್ಟರ್
ಸತಾರಾದಲ್ಲಿ ಹುಟ್ಟಿದ ಏಕನಾಥ್‌ ಶಿಂಧೆ ಬೆಳೆದಿದ್ದು ಥಾಣೆಯಲ್ಲಿ. ಆರಂಭದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿದ ಇವರು ಆನಂದ್ ದಿಘೆ ಪ್ರಭಾವದಿಂದ ಶಿವಸೇನೆಗೆ ಸೇರಿದರು. 18ನೇ ವಯಸ್ಸಿಗೆ ಶಿವಸೈನಿಕನಾದ ಶಿಂಧೆ 1997ರಲ್ಲಿ ಥಾಣೆ ಪಾಲಿಕೆ ಸದಸ್ಯರಾದರು. 2004ರಲ್ಲಿ ಥಾಣೆ ಶಾಸಕರಾಗಿ ಆಯ್ಕೆಯಾದರು. 2009ರಿಂದ ಕೊಪ್ರಿ ಪಚ್ಚಖಾಡಿ ಕ್ಷೇತ್ರದಿಂದ ಸತತವಾಗಿ ಗೆದ್ದಿದ್ದಾರೆ. 2015-19ರವರೆಗೂ ಲೋಕೋಪಯೋಗಿ ಸಚಿವರಾಗಿದ್ದರು. ಉದ್ಧವ್ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕೊನೆಗೆ ಬಂಡಾಯ ಎದ್ದು ಹೊರ ಬಂದಿದ್ದರು.

Live Tv

Share This Article
Leave a Comment

Leave a Reply

Your email address will not be published. Required fields are marked *