ಮಿಲಿಂದ್ ದಿಯೋರಾ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ: ಏಕನಾಥ್‌ ಶಿಂಧೆ

Public TV
1 Min Read

ಮುಂಬೈ: ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿರುವ ಮಿಲಿಂದ್ ದಿಯೋರಾ ಅವರು ಶಿವಸೇನೆ (Shivasene) ಸೇರ್ಪಡೆಯಾಗಲಿದ್ದಾರೆ ಎಂಬ ಗುಮಾನಿ ಎದ್ದಿದೆ. ಈ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವುದಾಗಿ ಹೇಳಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ದಿಯೋರಾ ಅವರು ಕಾಂಗ್ರೆಸ್‌ (Congress) ತೊರೆದ ವಿಚಾರ ನನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ಅವರು ಶಿವಸೇನೆಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ.

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ದಕ್ಷಿಣ ಮುಂಬೈನ ಮಾಜಿ ಸಂಸದ ಮಿಲಿಂದ್ ದಿಯೋರಾ (Milind Deora) ಇಂದು ಬೆಳಗ್ಗೆ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಕಾಂಗ್ರೆಸ್ ಮತ್ತು ಶಿವಸೇನೆ ಬಣದ ನಡುವಿನ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ವಿಚಾರದಿಂದ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್‌ ಮಾಳವಿಯಾ ವ್ಯಂಗ್ಯ

ದಿಯೋರಾ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವ ಸಾಧ್ಯತೆ ಇದೆ ಎಂದು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಮಿಲಿಂದ್‌ ದಿಯೋರಾ ಅವರು ತಮ್ಮ ಬೆಂಬಲಿಗರ ಮಾತುಗಳನ್ನು ಕೇಳುತ್ತಿದ್ದಾರೆ. ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದಾಗಿ ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿ ಶಿಂಧೆ ಅವರ ಸೇನೆ ಮತ್ತು ಬಿಜೆಪಿ ಆಡಳಿತಾರೂಢ ಮೈತ್ರಿಕೂಟವಾಗಿದೆ.

Share This Article