ಬಸ್ ಡಿಪೋದ ವಿಶ್ರಾಂತಿ ಕೊಠಡಿ ಕುಸಿದು 8 ಮಂದಿ ದುರ್ಮರಣ, ಮೂವರಿಗೆ ಗಾಯ

Public TV
1 Min Read

ಚೆನೈ: ಇಲ್ಲಿನ ರಾಜ್ಯ ಸಾರಿಗೆ ನಿಗಮದ ವಿಶ್ರಾಂತಿ ಕೊಠಡಿಯ ಮೇಲ್ಛಾವಣಿ ಕುಸಿದು 8 ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

ಈ ಘಟನೆ ತಮಿಳುನಾಡಿನ ನಾಗಪಟ್ಟಿನಂ ನ ಪೊರಾಯರ್ ನಲ್ಲಿ ಇಂದು ಮುಂಜಾನೆ ಸುಮಾರು 3.30ರ ವೇಳೆಗೆ ನಡೆದಿದೆ. ಡಿಪೋದಲ್ಲಿ ಮಲಗಿದ್ದ ಒಟ್ಟು 11 ಮಂದಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ. ದೀಪಾವಳಿ ರಜೆ ಇದ್ದಿದ್ದರಿಂದ ಡಿಪೋದಲ್ಲಿ ಪ್ರಯಾಣಿಕರು ಹೆಚ್ಚಾಗಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮೃತರನ್ನು ಪ್ರಭಾಕರನ್, ಬಾಲು, ಚಂದ್ರಶೇಖರನ್, ಧನಪಾಲ್, ಮುನಿಯಸಾಮಿ, ರಾಮಲಿಂಗಮ್, ಅನ್ಬರಸನ್ ಹಾಗೂ ಮಣಿವಣ್ಣನ್ ಎಂದು ಗುರುತಿಸಲಾಗಿದೆ. ವೆಂಕಟೇಶನ್, ಸೆಂಥಿಲ್ ಹಾಗೂ ಪ್ರೇಮ್‍ಕುಮಾರ್ ಗಾಯಗೊಂಡವರು. ಇವರನ್ನ ಕಾರೈಕಲ್ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ಇದು ಸುಮಾರು 60 ವರ್ಷಗಳಷ್ಟು ಹಳೆಯ ಕಟ್ಟಡವಾಗಿದ್ದು, ಬಸ್ ಚಾಲಕರು ಹಾಗೂ ನಿರ್ವಾಹಕರು ರಾತ್ರಿ ತಮ್ಮ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಅಂತ ಪೊಲಿಸರು ತಿಳಿಸಿದ್ದಾರೆ.

ಸ್ಥಳಕ್ಕೆ ನಾಗಪಟ್ಟಿನಂ ಜಿಲ್ಲಾಧಿಕಾರಿ ಡಾ. ಸುರೇಶ್ ಕುಮಾರ್ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ಸಚಿವ ವಿಜಯಭಾಸ್ಕರ್ ಪೊರಾಯರ್ ಕೂಡ ಶೀಘ್ರದಲ್ಲೇ ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ವಿವರ ಪಡೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *