ಮಂಡ್ಯ| ಶಾಲೆಯಲ್ಲಿ ಮೊಟ್ಟೆ ನೀಡಿದ್ದಕ್ಕೆ 70ಕ್ಕೂ‌ ಅಧಿಕ ಮಕ್ಕಳು ಬೇರೆ ಶಾಲೆಗೆ ಸೇರ್ಪಡೆ

Public TV
1 Min Read

ಮಂಡ್ಯ: ಸರ್ಕಾರಿ ಶಾಲೆಯ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮಕ್ಕಳಿಗೆ ಮೊಟ್ಟೆ ನೀಡುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಕಡ್ಲೆ ಮಿಠಾಯಿ ಹಾಗೂ ಬಾಳೆಹಣ್ಣನ್ನು ನೀಡುತ್ತಾ ಬರುಲಾಗುತ್ತಿದೆ. ಸಕ್ಕರೆ ನಾಡು ಮಂಡ್ಯದ ಆಲಕೆರೆ ಗ್ರಾಮದಲ್ಲಿ ಇದೀಗ ಮೊಟ್ಟೆಯ ತಕರಾರು ಎದ್ದಿದೆ.

ಆಲಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಸರ್ಕಾರ ಸರ್ಕಾರಿ ಶಾಲೆಗಳಿಗೆ ಮೊಟ್ಟೆ ಕೊಡುವ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದಾಗಿನಿಂದ ಈ ಗ್ರಾಮದ ಜನರು, ಶಾಲೆಯಲ್ಲಿ ಮೊಟ್ಟೆ ಕೊಡುವುದು ಬೇಡಾ ಎಂದು ಒಕ್ಕೊರಲಿನಿಂದ ತೀರ್ಮಾನ ಮಾಡಿದ್ದರು. ಏಕೆಂದರೆ ಈ ಶಾಲೆ ಇರುವ 100 ಮೀಟರ್ ಅಂತರದಲ್ಲಿ ವೀರಭದ್ರಸ್ವಾಮಿ‌ ದೇವಸ್ಥಾನವಿದೆ. ಹೀಗಾಗಿ, ದೇವಸ್ಥಾನದ ಸುತ್ತಮುತ್ತ ಮಾಂಸಾಹಾರ ಹಾಗೂ ಮೊಟ್ಟೆಯನ್ನು ಸೇವನೆ ಮಾಡಲ್ಲ. ಶಾಲೆಯಲ್ಲೂ ಮೊಟ್ಟೆಯ ಬದಲಿಗೆ ಇಷ್ಟು ದಿನ ಕಡ್ಲೆ ಮಿಠಾಯಿ ಹಾಗೂ ಬಾಳೆಹಣ್ಣನ್ನು ಕೊಡಲಾಗುತ್ತಿತ್ತು. ಇದನ್ನೂ ಓದಿ: ವಿದೇಶಕ್ಕೂ ಹರಡಿದೆ ಬೆಗ್ಗರ್‌ ಜಾಲ – ಪಾಕ್‌ ಭಿಕ್ಷುಕರ ವಾರ್ಷಿಕ ಆದಾಯ ಕೇಳಿದ್ರೆ ಬೆಚ್ಚಿ ಬೀಳ್ತೀರಿ…

ಕಳೆದ 20 ದಿನಗಳ ಹಿಂದೆ ಈ ಶಾಲೆಯಲ್ಲಿ ಓದುವ ಕೆಲ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ, ಅಧಿಕಾರಿಗಳು ಕಾನೂನಿನ ಪ್ರಕಾರ ಮೊಟ್ಟೆ ಕೊಡಲೇಬೇಕೆಂದು, ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆಯನ್ನು ನೀಡಿದ್ದಾರೆ.

ಅಧಿಕಾರಿಗಳ ಈ ನಿರ್ಧಾರ ಇದೀಗ ಇಲ್ಲಿನ ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ, 124 ಮಕ್ಕಳ ಪೈಕಿ 70ಕ್ಕೂ‌ ಅಧಿಕ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಆಲಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಿಡಿಸಿದ್ದಾರೆ. ಇದೀಗ 70ಕ್ಕೂ ಅಧಿಕ ಮಕ್ಕಳನ್ನು ಆಲಕೆರೆಯ ಪಕ್ಕದ ಊರಾದ ಕೀಲಾರ ಗ್ರಾಮದ ಸರ್ಕಾರಿ ಶಾಲೆ‌ ಹಾಗೂ ಇತರ ಶಾಲೆಗಳಿಗೆ ದಾಖಲು ಮಾಡಿದ್ದಾರೆ. ಇದನ್ನೂ ಓದಿ: 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

Share This Article