– ಎಸ್‌ಪಿ ಕಚೇರಿ ಮುತ್ತಿಗೆ ಹಾಕಲಿದ್ದಾರೆ ಕಾಂಗ್ರೆಸ್ ನಾಯಕರು
– ಜನಜಾಗೃತಿ ಸಮಾವೇಶ ಮಾಡಲು ಮುಂದಾದ ಬಿಜೆಪಿ
ಬೆಂಗಳೂರು: ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಆ.26 ರಂದು ಮಡಿಕೇರಿಯಲ್ಲಿರುವ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಈ ಮುತ್ತಿಗೆಗೆ ಪ್ರತಿಯಾಗಿ ಬಿಜೆಪಿ ಅಂದೇ ಮಡಿಕೇರಿಯಲ್ಲಿ ಜನ ಜಾಗೃತಿ ಸಮಾವೇಶ ಮಾಡಲು ಮುಂದಾಗಿದೆ.
ಆಗಸ್ಟ್ 26ರಂದು ಕಾಂಗ್ರೆಸ್ ಘಟಕ ಮಡಿಕೇರಿ ಚಲೋ ಹಮ್ಮಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಟಾಂಗ್ ಕೊಡಲು ರಾಜ್ಯ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಒಟ್ಟಿನಲ್ಲಿ ಈ ಶುಕ್ರವಾರ ಮಡಿಕೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಶಕ್ತಿ ಪ್ರದರ್ಶನ ನಡೆಯಲಿದೆ.
ಯಾವುದೇ ಕಾರಣಕ್ಕೂ ಬಳ್ಳಾರಿ ಪಾದಯಾತ್ರೆ ರೀತಿ ಲಾಭ ಮಾಡಿಕೊಳ್ಳಲು ಬಿಡಬೇಡಿ. ಸುಮ್ಮನೆ ಕೂರಬೇಡಿ ಎಂದು ಕೊಡಗು ಜಿಲ್ಲೆಯ ಇಬ್ಬರು ಶಾಸಕರಿಗೆ ರಾಜ್ಯ ಬಿಜೆಪಿ ಘಟಕ ಬೆಂಬಲ ಸೂಚಿಸಿದೆ. ಮುಯ್ಯಿಗೆ ಮುಯ್ಯಿಗೆ ಪಾಲಿಟಿಕ್ಸ್ ನಡೆಯಲಿ. ಸಿದ್ದು ಅಸ್ತ್ರಕ್ಮೆ ಬ್ರಹ್ಮಾಸ್ತ್ರ ರೆಡಿ ಇರಲಿ ಎಂದು ಸೂಚಿಸಲಾಗಿದೆ. ಚುನಾವಣೆ ವರ್ಷ ಇರುವಾಗ ಅವರ ಆರೋಪ, ಪ್ರತಿಭಟನೆಗಳಿಗೆ ಪ್ರತಿಕ್ರಿಯೆ ನೀಡಲೇಬೇಕು. ಈ ಹಿಂದೆ ಬಳ್ಳಾರಿ ಪಾದಯಾತ್ರೆ ವೇಳೆ ಬಿಜೆಪಿಯಿಂದ ಪ್ರತಿ ಅಸ್ತ್ರ ದೊಡ್ಡ ಮಟ್ಟದಲ್ಲಿ ಪ್ರಯೋಗ ಆಗಿರಲಿಲ್ಲ. ಇದು ಸಹಜವಾಗಿಯೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‍ಗೆ ದೊಡ್ಡ ಬೂಸ್ಟ್ ಕೊಟ್ಟಿತ್ತು. ಈಗ ಮತ್ತೆ ಅದೇ ರೀತಿ ಪೊಲಿಟಿಕಲ್ ಬೂಸ್ಟ್ ಸಿಗುವಂತೆ ಆಗಬಾರದೆಂದು ಪಕ್ಷದೊಳಗೆ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ ಯತ್ನಿಸಿದ್ದು ಸತ್ಯ; ನಾನೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ – ಎಂ.ಲಕ್ಷ್ಮಣ್
ಕೊಡಗಿನಲ್ಲಿ ಬಿಜೆಪಿ ಪ್ರಾಬಲ್ಯ ದೊಡ್ಡ ಮಟ್ಟದಲ್ಲಿ ಇದೆ. ಅಲ್ಲಿಯೇ ಉತ್ತರ ಕೊಡಿ ಎಂದು ಕೊಡಗು ಭಾಗದ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯಗೆ ಪಕ್ಷದ ಹಿರಿಯ ನಾಯಕರು ಸೂಚಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸಿದ್ದರಾಮಯ್ಯ ಟಿಪ್ಪು ಪರ ಬ್ಯಾಟಿಂಗ್ ಮಾಡುತ್ತಿರುವುದು ಮತ್ತು ಅದರ ಜೊತೆಗೆ ಈಗ ಸಾವರ್ಕರ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶವನ್ನ ಮುಂದಿಟ್ಟು ಹೋರಾಟಕ್ಕೆ ಬಿಜೆಪಿ ಸಿದ್ಧವಾಗಿದ್ದು ಆಗಸ್ಟ್ 26ರಂದು ಕಾಂಗ್ರೆಸ್ ಪ್ರತಿಭಟಿಸಿದರೆ ಅವತ್ತೇ ಬಿಜೆಪಿಯಿಂದ ಪ್ರತಿಭಟನೆಗೆ ಪ್ಲ್ಯಾನ್ ಮಾಡಲಾಗಿದೆ.
ಕೊಡಗು ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರ ಹೆಗಲಿಗೆ ಮುಯ್ಯಿಗೆ ಮುಯ್ಯಿ ಪೊಲಿಟಿಕ್ಸ್ ಹೊಣೆ ಹೊರಿಸಲಾಗಿದೆ. ರಾಜ್ಯದಲ್ಲಿ ಗಣೇಶೋತ್ಸವಕ್ಕೂ ಮುನ್ನವೇ ಕಾಂಗ್ರೆಸ್ – ಬಿಜೆಪಿ ಜಟಾಪಟಿ ಜೋರಾಗುವ ಎಲ್ಲಾ ಲಕ್ಷಣಗಳು ಇವೆ.