ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು

Public TV
2 Min Read

ಮಂಡ್ಯ: ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ಆದರೆ ಮೊಟ್ಟೆ (Egg) ವಿತರಣೆಯೇ ಮಂಡ್ಯದ ಗ್ರಾಮವೊಂದರಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಮೊಟ್ಟೆ ಕೊಡುವುದೇ ಆದರೆ ನಮ್ಮ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದು ಪೋಷಕರು ಹೇಳ್ತಿದ್ದಾರೆ.

ಮಂಡ್ಯದ (Madya) ಆಲಕೆರೆ (Alakere) ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ 120 ವಿದ್ಯಾರ್ಥಿಗಳ ಪೈಕಿ 80 ಮಕ್ಕಳು ಮೊಟ್ಟೆ ಬೇಡ ಅಂತಿದ್ದಾರೆ. ಪೋಷಕರು ಕೂಡ ಮೊಟ್ಟೆ ವಿತರಣೆಗೆ ವಿರೋಧಿಸಿದ್ದು, ಮೊಟ್ಟೆ ಕೊಟ್ರೆ ನಮ್ಮ ಮಕ್ಕಳಿಗೆ ಟಿಸಿ ಕೊಡಿ ಬೇರೆ ಶಾಲೆಗೆ ಸೇರಿಸ್ತೀವಿ ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

ಅಂದಹಾಗೇ ಇವರು ಹೀಗೆ ಹೇಳಲು ಕಾರಣ ಕೂಡ ಇದೆ. ಶಾಲೆ ಸಮೀಪದಲ್ಲೇ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನವಿದೆ. ಹಿಂದಿನಿಂದಲೂ ದೇವಾಲಯ ಸುತ್ತಮುತ್ತ ಮಾಂಸಾಹಾರ ನಿಷೇಧಿಸಲಾಗಿದೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ನಡೆದು ಬಂದಿದ್ದು, ಶಾಲೆಯಲ್ಲಿ ಮೊಟ್ಟೆ ನೀಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಬೇಡಿ ಎಂದು ಪೋಷಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು

ಇದೇ ಕಾರಣದಿಂದ ಕಳೆದ 3 ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಸರ್ಕಾರ ಮೊಟ್ಟೆ ವಿತರಿಸಲು ನಿರ್ಧರಿಸಿದಾಗಲೂ ಈ ಶಾಲೆಯಲ್ಲಿ ಮೊಟ್ಟೆ ಬದಲಿಗೆ ಬಾಳೆಹಣ್ಣು, ಚಿಕ್ಕಿ ನೀಡಲು ಶಾಲೆಯ ಎಸ್‌ಡಿಎಂಸಿ ನಿರ್ಧರಿಸಿದೆ. ಅಂದಿನಿಂದ ಇಲ್ಲಿಯವರೆಗೂ ಈ ನಿಯಮವನ್ನೇ ಪಾಲಿಸಿಕೊಂಡು ಬರಲಾಗ್ತಿದೆ. ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

ಆದರೆ ಈಗ ಗ್ರಾಮದ ಕೆಲವರು ಮಕ್ಕಳಿಗೆ ಪೌಷ್ಟಿಕಾಹಾರ ಪೂರೈಕೆ ದೃಷ್ಟಿಯಿಂದ ಮೊಟ್ಟೆ ವಿತರಿಸಲು ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆ ಕೂಡ ಸರ್ಕಾರದ ನಿಯಮದಂತೆ ಮೊಟ್ಟೆ ಕೊಡಲು ಮುಂದಾಗಿದ್ದು, ಅಧಿಕಾರಿಗಳ ನಿರ್ಧಾರ ಗ್ರಾಮಸ್ಥರನ್ನ ಕೆರಳಿಸಿದೆ. ಮೊಟ್ಟೆ ತಿನ್ನುವ ಮಕ್ಕಳಿಗೆ ಅವರ ಮನೆಗೆ ಮೊಟ್ಟೆ ತಲುಪಿಸಿ. ಆದರೆ ಶಾಲೆಯಲ್ಲಿ ಮೊಟ್ಟೆ ವಿತರಿಸಿ ಜನರ ಭಾವನೆಗೆ ನೋವುಂಟು ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಆಲಕೆರೆ ಗ್ರಾಮದ ಮೊಟ್ಟೆ ವಿವಾದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ. ಮೊಟ್ಟೆ ಕೊಟ್ಟರೇ 80 ವಿದ್ಯಾರ್ಥಿಗಳು ಶಾಲೆ ಬಿಡುವ ಆತಂಕ ಒಂದೆಡೆಯಾದರೆ, ಮೊಟ್ಟೆ ಕೊಡದಿದ್ರೆ ಸರ್ಕಾರದ ಪೌಷ್ಟಿಕಾಹಾರ ಪೂರೈಕೆ ನಿಯಮ ಉಲ್ಲಂಘನೆಯಾಗುವ ಭಯ ಅಧಿಕಾರಿಗಳನ್ನು ಕಾಡುತ್ತಿದೆ.

Share This Article