ಇನ್ನು ಮುಂದೆ ಮಕ್ಕಳು ಪುಸ್ತಕ ನೋಡಿ ಪರೀಕ್ಷೆ ಬರೆಯಬೇಕು: ಎನ್.ಮಹೇಶ್

Public TV
2 Min Read

ಚಾಮರಾಜನಗರ: ಮಕ್ಕಳು ಪಠ್ಯಪುಸ್ತಕ ನೋಡಿಯೇ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಜಾರಿಗೆ ತರುವ ಯೋಚನೆ ರೂಪಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಶಿಕ್ಷಕರಿಗೆ ಹೇಳಿದ್ದಾರೆ.

ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸದ್ಯದ ಪ್ರಾಥಮಿಕ ಶಿಕ್ಷಣದ ಪರೀಕ್ಷಾ ಪದ್ಧತಿ (ಕ್ಲೋಸ್ಡ್ ಬುಕ್ ಎಕ್ಸಾಮ್) ಅವೈಜ್ಞಾನಿವಾಗಿದೆ. ಹೀಗಾಗಿ ಮಕ್ಕಳು ನೇರವಾಗಿ ಪುಸ್ತಕ ತೆರೆದು ಪರೀಕ್ಷೆ ಬರೆಯುವ ಪದ್ಧತಿ (ಓಪನ್ ಬುಕ್ ಎಕ್ಸಾಮ್) ಜಾರಿಗೆ ತರಬೇಕಾಗಿದೆ ಎಂದು ಅವರು ಹೇಳಿದರು.

ನನ್ನ ಹೊಸ ಯೋಜನೆಗಳಿಗೆ ಶಿಕ್ಷಕರು ಬದಲಾಗಬೇಕೇ ಹೊರತು ವಿದ್ಯಾರ್ಥಿಗಳಲ್ಲ. ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳೇ ಕೇಂದ್ರ ಬಿಂದು, ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಶಿಕ್ಷಕರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ ಈ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ ಎಂದು ಭರವಸೆ ನೀಡಿದರು.

ಪರೀಕ್ಷಾ ಕೇಂದ್ರದ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟಿರುತ್ತಾರೆ, ವಿದ್ಯಾರ್ಥಿಗಳು ಅತ್ತ ಇತ್ತ ನೋಡುವಂತಿಲ್ಲ ಎನ್ನುವ ನಿಬಂಧನೆ ಮಕ್ಕಳ ಮೇಲೆ ಹೇರಲಾಗುತ್ತಿದೆ. ವಿದ್ಯಾರ್ಥಿಗಳು ಕ್ರಿಮಿನಲ್‍ಗಳಲ್ಲ. ಹೀಗಾಗಿ ಶಿಕ್ಷಣ ವ್ಯವಸ್ಥೆ ಹಾಗೂ ಪರೀಕ್ಷಾ ವಿಧಾನ ಬದಲಾವಣೆಗೆ ಶಿಕ್ಷಣ ತಜ್ಞರು ಮತ್ತು ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದರು.

ಪರೀಕ್ಷೆಯಲ್ಲಿ ಪುಸ್ತಕ ನೋಡದೆ ಬರೆದವರು ಬುದ್ಧಿವಂತರು, ಉಳಿದವರು ದಡ್ಡರು ಎನ್ನುವ ಧೋರಣೆ ಸರಿಯಲ್ಲ. ಪಾಠ ಮಾಡಿದ ಬಳಿಕ ಮಕ್ಕಳಿಗೆ ಪ್ರಶ್ನೆಗಳಿಗೆ ಉತ್ತರ ಬರೆಯುವಂತೆ ಹೇಳಬಾರದು. ಶಿಕ್ಷಕರೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮಕ್ಕಳಿಗೆ ನೀಡಿ, ಪುಸ್ತಕ ನೋಡಿ ಉತ್ತರ ಬರೆಯುವಂತೆ ಸಲಹೆ ನೀಡಬೇಕು. ಆಗಲೂ ಉತ್ತರ ಬರೆಯಲು ಸಾಧ್ಯವಾಗದ ಮಕ್ಕಳಿಗೆ ಪಕ್ಕದ ಸಹಪಾಠಿಯನ್ನು ಕೇಳಿ ಉತ್ತರ ಬರೆಯುಂತೆ ತಿಳಿಸಬೇಕು. ಈ ವಿಧಾನದಿಂದ ಮಕ್ಕಳಲ್ಲಿರುವ ಪರೀಕ್ಷಾ ಭಯ ದೂರವಾಗುವುದರ ಜೊತೆಗೆ ಸೃಜನಶೀಲತೆ ಹೆಚ್ಚಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಇಂದು ಇಂಗ್ಲಿಷ್ ಸಂವಹನ ಅಗತ್ಯವಾಗಿದೆ. ಹೀಗಾಗಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಕಲಿಕೆಯಾಗಬೇಕು. ಕನ್ನಡದ ಜೊತೆಗೆ ಇಂಗ್ಲಿಷ್ ಶಿಕ್ಷಣವನ್ನು ಹೇಗೆ ನೀಡಬಹುದು ಎನ್ನುವ ಕುರಿತು ಶಿಕ್ಷಣ ತಜ್ಞರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಮೊಬೈಲ್‍ಗಳನ್ನು ಮುಖ್ಯಶಿಕ್ಷಕರ ಕೊಠಡಿಯಲ್ಲಿ ಇಟ್ಟು ತರಗತಿಗೆ ಹೋಗಬೇಕು. ಕೇವಲ ಶಿಕ್ಷಕರಷ್ಟೇ ಅಲ್ಲ ಮಕ್ಕಳು ಕೂಡಾ ನಿಯಮ ಪಾಲಿಸಬೇಕು. ತರಗತಿಯಲ್ಲಿ ಮೊಬೈಲ್‍ನಿಂದ ಕಿರಿಕಿರಿ ಉಂಟಾಗುತ್ತದೆ ಎನ್ನುವ ಉದ್ದೇಶ ಅಷ್ಟೇ. ನಾನೇನು ಮೊಬೈಲ್ ವಿರೋಧಿಯಲ್ಲ. ಯಾವ ಸಮಯದಲ್ಲಿ ಬೇಕಾದರು ನಾನು ಶಾಲೆಗೆ ಭೇಟಿ ನೀಡಬಹುದು ಎಂದು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *