ಜೂನ್‍ನಲ್ಲಿ SSLC ಪರೀಕ್ಷೆಗೆ ಚಿಂತನೆ – ಫೇಸ್‍ಬುಕ್ ಲೈವ್‍ನಲ್ಲಿ ಸುರೇಶ್ ಕುಮಾರ್ ಸ್ಪಷ್ಟನೆ

Public TV
3 Min Read

– ಶಿಕ್ಷಣ ಇಲಾಖೆಯಿಂದ ಈಗಾಗಲೇ ಸಿದ್ಧತೆ ಆರಂಭ
– ಹಿಂದಿನ ತರಗತಿ ಪುಸ್ತಕಗಳನ್ನ ಉತ್ತಮವಾಗಿಟ್ಟುಕೊಳ್ಳಿ

ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಬಹುತೇಕ ಸಡಿಲ ಆದ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ಶುರುವಾಗಿದೆ. ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಡಿಡಿಪಿಐಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್‍ಬುಕ್ ಲೈವ್‍ನಲ್ಲಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ನಾನು ವಿದ್ಯಾರ್ಥಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿದ್ದೇನೆ. ಆಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಬೇಕಾ ಎಂದು ಪ್ರಶ್ನಿಸಿದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವರ್ಷ ಪರೀಕ್ಷೆಗಾಗಿ ಪರಿಶ್ರಮಪಟ್ಟಿದ್ದೇವೆ. ಪರೀಕ್ಷೆ ಬೇಕು ಎಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಲು ನಾವು ತಯಾರಿದ್ದೇವೆ ಎಂದು ತಿಳಿಸಿದರು.

ಸೋಮವಾರ ನಮ್ಮ ರಾಜ್ಯದ ಎಲ್ಲಾ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದ ನಡೆಸಿದ್ದೇನೆ. ಸದ್ಯಕ್ಕೆ ದೂರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ರಿವಿಷನ್ ಕ್ಲಾಸ್ ನಡೆಸಲಾಗುತ್ತಿದೆ. ಇದರಿಂದ ಮಕ್ಕಳು ತುಂಬಾ ಸಂತೋಷವಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆ ಬೋಧನೆ ಮಾಡಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೂ ಜೂನ್ ತಿಂಗಳಲ್ಲಿ ಬೋಧನೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಯಾರೋ ಹೇಳಿದ ದಿನಾಂಕಕ್ಕೆ ವಿದ್ಯಾರ್ಥಿಗಳು ತಲೆ ಕೆಡಿಸಿಕೊಳ್ಳಬೇಡಿ. ಪುನರ್ ಮನನ ತರಗತಿಗಳು ನಡೆದ ಮೇಲೆ ಜೂನ್ ತಿಂಗಳಲ್ಲಿ ಪರೀಕ್ಷೆ ಮಾಡುವ ಯೋಚನೆ ಮಾಡುತ್ತೇವೆ. ಈಗ ಪರೀಕ್ಷೆ ಮಾಡುವುದಾದರೂ ತಕ್ಷಣವೇ ಪರೀಕ್ಷೆ ಮಾಡುವುದಿಲ್ಲ. ಶಿಕ್ಷಣ ಇಲಾಖೆ ಘೋಷಣೆ ಮಾಡುವ ವೇಳಾಪಟ್ಟಿ ನಿಖರವಾಗಿರಲಿದೆ. ಪರೀಕ್ಷೆ ಮಾಡುವಾಗ ಮಕ್ಕಳ ಹಿತ ಮುಖ್ಯ. ಹೀಗಾಗಿ ಮಕ್ಕಳ ಹಿತ ನೋಡಿಕೊಂಡು ಪರೀಕ್ಷೆ ವೇಳಾಪಟ್ಟಿ ಹಾಕುತ್ತೀವಿ. ಪರೀಕ್ಷೆಯ ವೇಳಾಪಟ್ಟಿ ಘೋಷಣೆ ಮಾಡಿದ ಮೇಲೆ ಕನಿಷ್ಠ ನಿಮಗೆ 15 ರಿಂದ 20 ದಿನ ಸಮಯ ಸಿಗುತ್ತವೆ ಎದು ಸುರೇಶ್ ಕುಮಾರ್ ಹೇಳಿದರು.

ಪರೀಕ್ಷಾ ಕೊಠಡಿಯಲ್ಲಿ ಸಾಮಾನ್ಯವಾಗಿ 24 ಜನ ಕೂರಲಿದ್ದಾರೆ. ಆದರೆ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಲಿದ್ದೇವೆ. ಪರೀಕ್ಷೆ ಬರೆಯುವಾಗ ಮಾಸ್ಕ್ ಧರಿಸುವುದು ಕಡ್ಡಾಯ. ಪರೀಕ್ಷೆಗೂ ಮುನ್ನ ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯ. ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮರ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಾಗುತ್ತೆ. ಪರೀಕ್ಷೆ ಮುನ್ನ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ. ಇದಕ್ಕೆ ನಮ್ಮ ಇಲಾಖೆ ಸಿದ್ಧವಾಗುತ್ತಿದೆ. ಹಾಸ್ಟೆಲ್‍ನಲ್ಲಿ ಇದ್ದವರು ಊರಿಗೆ ಹೋಗಿದ್ರೆ ಅಂತಹ ವಿದ್ಯಾರ್ಥಿಗಳಿಗೆ ಅವರ ಊರಿನ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತೆ. ಪರೀಕ್ಷಾ ಕೇಂದ್ರಗಳ ಬದಲಾಗಿ ಊರಿನ ಬಳಿ ಇರೋ ಶಾಲೆಗಳಲ್ಲಿಯೇ ಪರೀಕ್ಷೆ ಬರೆಯಬಹುದಾ ಎಂದು ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.

ಜೂನ್ ಎರಡನೇ ವಾರ ಅಥವಾ ಮೂರನೇ ವಾರ ಪರೀಕ್ಷೆ ಮಾಡುವ ಚಿಂತನೆ ಇದೆ. ಈ ಬಗ್ಗೆ ಈಗಾಗಲೇ ಸಿದ್ಧತೆ ಆರಂಭ ಮಾಡಿದ್ದೇವೆ. ಕೊರೊನಾ ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಾಗಬೇಕು. ಆಗಾಗ ಪರೀಕ್ಷೆ ದಿನಾಂಕದ ಬಗ್ಗೆ ಗೊಂದಲ ಹುಟ್ಟಿಸುವ ಪ್ರಯತ್ನ ನಡೆಯಲಿದೆ. ಸೂಕ್ತ ದಿನಾಂಕ ಪ್ರಕಟಿಸಿ ನಾವೇ ಆದೇಶ ಹೊರಡಿಸುತ್ತೇವೆ. ಯಾವುದೇ ವದಂತಿಗೂ ತಲೆಕೆಡಿಸಿಕೊಳ್ಳಬೇಡಿ. ಮುಂದಿನ 15 ದಿನ ಅಥವಾ ತಿಂಗಳಲ್ಲಿ ಮತ್ತೊಮ್ಮೆ ನಿರ್ಧಾರ ತಿಳಿಸುತ್ತೇನೆ. ಮಕ್ಕಳಲ್ಲಿ ಆಂತಕ ಸೃಷ್ಟಿಸದಂತೆ ಪೋಷಕರಿಗೆ ಸಚಿವರು ಕಿವಿಮಾತು ಹೇಳಿದರು.

 

ಈಗ 9ನೇ ತರಗತಿಗೆ ಬಂದಿರುವ ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿಯ ಪುಸ್ತಕಗಳನ್ನ ಉತ್ತಮವಾಗಿಟ್ಟುಕೊಳ್ಳಿ. ತಮ್ಮ ಪುಸ್ತಕಗಳನ್ನ ಹೊಸದಾಗಿ ಪಾಸ್ ಆಗಿ ಬಂದಿರೋ ಮಕ್ಕಳಿಗೆ ನೀಡಿ. ಹೊಸದಾಗಿ ಪುಸ್ತಕಗಳನ್ನ ಪ್ರಿಂಟ್ ಮಾಡಿ ತರುವುದು ಈಗ ಕಷ್ಟಕರವಾಗಿದೆ. ಹೀಗಾಗಿ ನಿಮ್ಮ ಪುಸ್ತಕಗಳನ್ನು ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ನೀಡಿ. ಸದ್ಯಕ್ಕೆ ದೂರದರ್ಶನದಲ್ಲಿ ಬರುತ್ತಿರೋ ಪುನರ್ ಮನನ ತರಗತಿಯನ್ನ ಕೇಳಿ. ಪ್ರಶ್ನೆ ಪತ್ರಿಕೆಗಳನ್ನ ಸಾಧ್ಯವಾದಷ್ಟು ಬಗೆಹರಿಸೋ ಪ್ರಯತ್ನ ಮಾಡಿ. ಜೂನ್ ತಿಂಗಳಲ್ಲಿ ಒಂದು ನಿರ್ದಿಷ್ಟ ಟೈಮ್ ಟೇಬಲ್ ಸಿದ್ಧಪಡಿಸುತ್ತೇವೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *