ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಬಸ್ ಪಾಸ್ ಇಲ್ಲ

Public TV
1 Min Read

ಬೆಂಗಳೂರು: ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಬಸ್ ಪಾಸ್ ಸಿಗುವುದಿಲ್ಲ ಎಂದು ನೂತನ ಶಿಕ್ಷಣ ಸಚಿವ ಗುಬ್ಬಿ ಶ್ರೀನಿವಾಸ್ ಪರೋಕ್ಷವಾಗಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡುವ ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ ಜಾರಿಕೊಂಡರು. ಹಿಂದಿನ ಸರ್ಕಾರದಲ್ಲಿ ಉಚಿತ ಪಾಸ್ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನು ತಡೆ ಹಿಡಿಯಲಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಸಮಸ್ಯೆಗಳಿವೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಮೂಲ ಸೌಕರ್ಯ ವಂಚಿತ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ. ಅನುದಾನವನ್ನು ನೋಡಿಕೊಂಡು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಮಾಧ್ಯಮ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ. ಆದರೂ ಪ್ರತಿವರ್ಷ 20 ರಿಂದ 30 ಶಾಲೆಗಳು ಮುಚ್ಚುತ್ತಿವೆ. ಶಿಕ್ಷಣ ವ್ಯಾಪಾರೀಕರಣ ಆಗುತ್ತಿರುವುದು ಇದಕ್ಕೆ ಕಾರಣ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಳ್ಳಿಗಳಿಗೂ ವ್ಯಾನ್ ಕಳಿಸಿ ಮಕ್ಕಳನ್ನು ಕರೆತರುತ್ತಿವೆ. ಇದೆಲ್ಲವನ್ನು ಗಮದಲ್ಲಿಟ್ಟುಕೊಂಡು ಕನ್ನಡ ಶಾಲೆಗಳ ಅಭಿವೃದ್ಧಿಗೊಳಿಸಬೇಕಿದೆ ಎಂದರು.

ಸಿಬಿಎಸ್‍ಸಿ, ಐಸಿಎಸ್‍ಸಿ ಗಳಲ್ಲಿ ಕೂಡ ಕನ್ನಡ ಕಡ್ಡಾಯಗೊಳಿಸಿ, ಅನುಷ್ಠಾನಕ್ಕೆ ತರಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಪಠ್ಯಪುಸ್ತಕ ಬದಲಾವಣೆ ಮಾಡುತ್ತೇವೆ. ಪ್ರಾದೇಶಿಕತೆ ಒಳಗೊಂಡ ಪಠ್ಯ ರಚನೆಗೆ ನಿರ್ಧಾರ ನಡೆದಿದೆ. ದೆಹಲಿ ಹಾಗೂ ಕೇರಳ ಶಿಕ್ಷಣ ಪದ್ಧತಿಯ ಬಗ್ಗೆ ಅಧ್ಯಯನ ನಡೆಸಲು ನಿಯೋಗ ಕಳಿಸಲಾಗುತ್ತದೆ. ಅಲ್ಲಿನ ವ್ಯವಸ್ಥೆ, ಪಠ್ಯ ಪುಸ್ತಕ ಅಧ್ಯಯನ ಮಾಡಿ ಪುಸ್ತಕ ಬದಲಾವಣೆ ಮಾಡುವ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.

ಗ್ರಂಥ ಪಾಲಕರ ವೇತನ ಹೆಚ್ಚಳದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಗ್ರಂಥ ಪಾಲಕರು ಮಂಗಳವಾರ ನನ್ನನ್ನು ಭೇಟಿ ಮಾಡಿದರು. ಈ ಮೂಲಕ ವೇತನ ಹೆಚ್ಚಳ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಕೆಲವು ಗ್ರಂಥಾಲಯಗಳು ಆರ್ ಡಿಪಿಆರ್ ಅಡಿ ಬರುತ್ತವೆ. ಹೀಗಾಗಿ ಆ ಇಲಾಖೆ ಜೊತೆಗೂ ಚರ್ಚೆ ಮಾಡಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *