ಹಾವೇರಿ: ಫೀಸ್ ಕಟ್ಟಿಲ್ಲ ಅಂತ ಹಾಲ್ ಟಿಕೆಟ್ ನೀಡದೇ ಕಾಲೇಜು ಆಡಳಿತ ಮಂಡಳಿ ಸತಾಯಿಸಿದ್ದಲ್ಲದೇ, ಪರೀಕ್ಷೆ ಬರೆಯಲು ಅವಕಾಶ ಕೊಡದೇ ದರ್ಪತೋರಿದ್ದ ಶಿಕ್ಷಕಿಯನ್ನು ಶಿಕ್ಷಣ ಇಲಾಖೆ (Education Dept) ಅಮಾನತುಗೊಳಿಸಿದೆ.
ಶನಿವಾರ (ಫೆ.28) ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ರಾಣೇಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜಿನಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ `ಪಬ್ಲಿಕ್ ಟಿವಿ’ ಸುದ್ದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಶಿಕ್ಷಣ ಇಲಾಖೆ ಸರ್ಕಾರಿ ಹಿರಿಯ ಉನ್ನತೀಕರಿಸಿದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುನೀತಾ ಡಿ.ಬಿಯನ್ನು ಅಮಾನತುಗೊಳಿಸಿದೆ. ಇದನ್ನೂ ಓದಿ: ಫೀಸ್ ಕಟ್ಟಿಲ್ಲ ಅಂತ ಹಾಲ್ ಟಿಕೆಟ್ ನೀಡದ ಆಡಳಿತ ಮಂಡಳಿ – ಪುಕ್ಸಟ್ಟೆ ಕಲಿಸ್ತಾರಾ ಅಂತ ಶಿಕ್ಷಕಿ ಕಿರಿಕ್, ವಿದ್ಯಾರ್ಥಿನಿ ಪರದಾಟ
ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡದೇ ದರ್ಪ ತೋರಿದ್ದರು. ಜೊತೆಗೆ ಆಡಳಿತ ಮಂಡಳಿ ಪರವಾಗಿ ಮಾತನಾಡಿದ್ದು, ಹಸ್ತಕ್ಷೇಪ ಇರುವುದು ಕಂಡುಬಂದಿತ್ತು. ತನಿಖೆ ಮಾಡಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ದಂಡಿನ ಅವರು ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗರಿಂದ ಸೂಕ್ತಕ್ರಮಕ್ಕಾಗಿ ಶಿಪಾರಸ್ಸು ಮಾಡಿದ ಪತ್ರದನ್ವಯ ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ನಡೆದಿದ್ದೇನು?
ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ರಾಣೆಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜಿಗೆ ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ಬಿ ಶುಲ್ಕ ಕಟ್ಟಿಲ್ಲ ಅಂತ ಪರೀಕ್ಷೆಗೆ ಬಿಡದೇ ಸತಾಯಿಸಿದ್ದರು. 30 ಸಾವಿರ ರೂ. ಶುಲ್ಕ ಕಟ್ಟಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಿಲ್ಲ. ಆದರೂ ವಿದ್ಯಾರ್ಥಿನಿ ಇಂದು (ಫೆ.28) ಕನ್ನಡ ಪರೀಕ್ಷೆ ಬರೆಯಲು ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ವಿದ್ಯಾರ್ಥಿನಿ ಸಾರಾಳನ್ನು ತಡೆದು, ಎಲ್ಲಾ ಕಾಲೇಜಿನವರೂ ಪುಗಸೆಟ್ಟೆ ಕಲಿಸ್ತಾರಾ? ಎಂದಿದ್ದರು.
ಈ ವೇಳೆ ವಿದ್ಯಾರ್ಥಿನಿ ಸಾರಾಗೆ ಹಾಲ್ ಟಿಕೆಟ್ ನೀಡುವಂತೆ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಆಗ್ರಹಿಸಿದ್ದು, ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡ್ತಿದ್ದೀರಿ ಎಂದು ಕಿಡಿಕಾರಿದ್ದರು. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಪೀಸ್ ಕಟ್ಟೋವರೆಗೂ ಬೈಕ್ ಅಡಮಾನ ಇಟ್ಟುಕೊಂಡು ನಂತರ ಹಾಲ್ ಟಿಕೆಟ್ ನೀಡಿತ್ತು.ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧ; ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಮೂಲದ ಟೆಕ್ಕಿ ಕುಟುಂಬ

