ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ – 51 ಕೋಟಿ ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ವಶ

Public TV
2 Min Read

ಚಿತ್ರದುರ್ಗ: ಅಕ್ರಮ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್‌ (Congress) ಶಾಸಕ ವೀರೇಂದ್ರ ಪಪ್ಪಿ (K.C) ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ (ED Raids ) ನಡೆಸಿದ್ದಾರೆ. ಈ ವೇಳೆ 51 ಕೋಟಿ ರೂ. ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ.

ಅಧಿಕಾರಿಗಳು ಚಳ್ಳಕೆರೆಯ (Challakere) ಫೆಡರಲ್ ಬ್ಯಾಂಕ್‌ ಸೇರಿದಂತೆ ಪಟ್ಟಣದ ಹಲವೆಡೆ ಶೋಧ ನಡೆಸಿದ್ದಾರೆ. ಅವರು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ (Online Betting) ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆ ಎಂಬುದು ಇಡಿ (ED) ದಾಳಿ ವೇಳೆ ಬಯಲಾಗಿತ್ತು. ಈ ಹಿಂದೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು 103 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ವೀರೇಂದ್ರ ಪಪ್ಪಿ ವಿರುದ್ಧದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಕೇಸ್ – ಚಳ್ಳಕೆರೆಯ ಹಲವೆಡೆ ಇಡಿ ದಾಳಿ

ಆಗಸ್ಟ್ 29ರಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಅಕ್ರಮ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದಡಿ ಶಾಸಕ ವೀರೇಂದ್ರ ಪಪ್ಪಿಯನ್ನು ಸಿಕ್ಕಿಂನಿಂದ ಕರೆತಂದು ಬಂಧಿಸಿದ್ದರು. ಬೆಳಗಿನ ಜಾವ 5:30ರಿಂದ ಮಧ್ಯರಾತ್ರಿ 12:45 ರವರೆಗೆ ಶಾಸಕ ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರರಾದ ಕೆಸಿ ತಿಪ್ಪೇಸ್ವಾಮಿ ಹಾಗೂ ನಾಗರಾಜ್ ಮನೆಯಲ್ಲೂ ಸಹ ತೀವ್ರ ಶೋಧ ನಡೆಸಿ ಕೊನೆಗೆ ದಾಖಲೆಯೊಂದಿಗೆ ಅಧಿಕಾರಿಗಳು ವಾಪಸ್ ಹೋಗಿದ್ದರು. ಶಾಸಕರ ಒಡೆತನದಲ್ಲಿ ಗೋವಾದಲ್ಲಿ ನಡೆಯುತ್ತಿರುವ ಕ್ಯಾಸಿನೋ ಹಾಗೂ ಚಿತ್ರದುರ್ಗ ಹಾಗೂ ಬೆಂಗಳೂರು ಮತ್ತು ಸಿಕ್ಕಿಂನಲ್ಲಿರುವ ಮನೆಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.

ದಾಳಿ ವೇಳೆ ಇಡಿ ಅಧಿಕಾರಿಗಳಿಗೆ 12 ಕೋಟಿ ರೂ. ನಗದು, 1 ಕೋಟಿ ವಿದೇಶ ಕರೆನ್ಸಿ, 6 ಕೋಟಿ ಬೆಲೆ ಬಾಳುವ ಚಿನ್ನಾಭರಣ ಮತ್ತು 10 ಕೆಜಿ ಬೆಳ್ಳಿ ಪತ್ತೆಯಾಗಿತ್ತು. ಅಲ್ಲದೇ 5 ಐಷಾರಾಮಿ ವಾಹನಗಳನ್ನು ಕೂಡ ಇಡಿ ಅಧಿಕಾರಿಗಳು ಸೀಜ್ ಮಾಡಿದ್ದು, ಶಾಸಕ ಪಪ್ಪಿ ಅವರಿಗೆ ಸೇರಿದ 17 ಬ್ಯಾಂಕ್ ಅಕೌಂಟ್ ಹಾಗೂ 2 ಲಾಕರ್‌ಗಳನ್ನು ಸೀಜ್ ಮಾಡಿದ್ದಾರೆ. ಜೊತೆಗೆ ವೀರೇಂದ್ರ ಅವರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 40.69 ಕೋಟಿ ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. ಸೇರಿದಂತೆ 55 ಕೋಟಿ ರೂ. ಹಣವನ್ನು ಇಡಿ ಫ್ರೀಜ್ ಮಾಡಿದೆ. ಸದ್ಯ ವಿರೇಂದ್ರ ಪಪ್ಪಿಯವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ – ಅಲ್ಪಾವಧಿಯಲ್ಲಿ 2,000 ಕೋಟಿ ರೂ. ಲಾಭಗಳಿಸಿದ ವೀರೇಂದ್ರ ಪಪ್ಪಿ

Share This Article