ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಇತರೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ಇಡಿ ವಿಶೇಷ ನ್ಯಾಯಾಲಯ ಆಗಸ್ಟ್ 2ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ಪ್ರಕರಣದ ತನಿಖೆ ನಡೆಸಿದ್ದ ಇ.ಡಿ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಸಲ್ಲಿಸಿತ್ತು. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ತಮ್ಮ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿಗಣಿಸಲು ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ವಿಕಾಸ್ ದುಲ್ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಜಾಮೀನು ನೀಡದಂತೆ ಇಡಿ ಪರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಪ್ರತಿವಾದ ಮಂಡಿಸಿದ ಡಿ.ಕೆ.ಶಿವಕುಮಾರ್ ಪರ ವಕೀಲರು, ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿಗಣಿಸುವಂತೆ ಎಂದು ಕೋರಿದ್ದರು. ಇದನ್ನೂ ಓದಿ: ಧರ್ಮ, ಸಿದ್ಧಾಂತದ ಹೆಸರಿನಲ್ಲಿ ಕೆಲವರು ಸಂಘರ್ಷ ಸೃಷ್ಟಿಸುತ್ತಿದ್ದಾರೆ: ಅಜಿತ್ ದೋವಲ್
ಇತರೆ ನಾಲ್ಕು ಆರೋಪಿಗಳ ಪರ ವಾದ ಮಂಡಿಸಿದ ವಕೀಲರು ಇ.ಡಿ ಜಾಮೀನು ನೀಡಲು ವಿರೋಧಿಸುವುದಕ್ಕೆ ಅರ್ಥವಿಲ್ಲ. ಯಾವ ಆಧಾರದಲ್ಲಿ ಇಡಿ ಜಾಮೀನು ವಿರೋಧಿಸುತ್ತಿದೆಯೋ ಗೊತ್ತಿಲ್ಲ. ಎಲ್ಲ ಅಂಶಗಳು ಮೇಲ್ಮಟ್ಟದ ನ್ಯಾಯಾಲಯಗಳಲ್ಲಿ ಚರ್ಚೆಯಾಗಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದ ಉದಾಹರಣೆಗಳು ಇವೆ. ಇ.ಡಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇನ್ನು ಆರೋಪಿಗಳನ್ನ ಬಂಧಿಸುವ ಅಗತ್ಯವೇ ಬರುವುದಿಲ್ಲ. ಇ.ಡಿ ತನಿಖೆಯ ವೇಳೆ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಜಾರ್ಜ್ಶೀಟ್ ಸಲ್ಲಿಕೆ ಬಳಿಕ ಜಾಮೀನು ಪಡೆಯಲು ವಿರೋಧಿಸುವಂತಿಲ್ಲ ಎಂದು ಹೇಳಿದ್ದರು. ವಾದ-ಪ್ರತಿವಾದ ಆಲಿಸಿದ ಬಳಿಕ ಅಗಸ್ಟ್ 2, ಮಧ್ಯಾಹ್ನ ಮೂರು ಗಂಟೆಗೆ ಆದೇಶ ಕಾಯ್ದಿರಿಸಲಾಯಿತು.