ನವದೆಹಲಿ: ಇವತ್ತು ಡಿ.ಕೆ ಬ್ರದರ್ಸ್ ಗೆ ಸಂಕಷ್ಟದ ದಿನ ಅಂದ್ರೆ ತಪ್ಪಾಗಲ್ಲ. ಒಂದು ಕಡೆ ತಿಹಾರ್ ಜೈಲಿನಲ್ಲಿ ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರನ್ನ ವಿಚಾರಣೆ ನಡೆಸಿದ್ರೆ, ಮತ್ತೊಂದು ಕಡೆ ಇಡಿ ಕಚೇರಿಯಲ್ಲಿ ಸಂಸದ ಡಿ.ಕೆ ಸುರೇಶ್ ವಿಚಾರಣೆ ಮಾಡಲಿದ್ದಾರೆ. ಏಕಕಾಲಕ್ಕೆ ಆರಂಭ ಆಗಲಿರುವ ವಿಚಾರಣೆ ಡಿ.ಕೆ ಬ್ರದರ್ಸ್ ನಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಕುಟುಂಬ ಇಡಿ ಹಿಡಿತದಲ್ಲಿ ಬಂಧಿಯಾಗಿದೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಗಳಿಕೆ ಕೇಸ್‍ನಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಡಿಕೆಶಿಗೆ ಇಂದು ಒಂದು ಕಡೆ ವಿಚಾರಣೆ ನಡೆದ್ರೆ ಮತ್ತೊಂದು ಕಡೆ ಡಿಕೆಶಿ ಸಹೋದರ ಡಿ.ಕೆ ಸುರೇಶ್‍ಗೆ ಇಡಿ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಡ್ರೀಲ್ ಮಾಡಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ಹೆಕ್ಕಿ ತೆಗೆದಿದ್ದಾರೆ. ಗುರುವಾರ ಆರೂವರೆ ಗಂಟೆಗಳ ಕಾಲ ಸತತ ವಿಚಾರಣೆ ನಡೆಸಿದ್ರೂ ಸುರೇಶ್ ವಿಚಾರಣೆ ಪೂರ್ಣಗೊಂಡಿಲ್ಲ. ಹೀಗಾಗಿ ಇಂದೂ ಸಹ ವಿಚಾರಣೆ ಮುಂದುವರಿಯಲಿದೆ.
338 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿರುವ ಸಂಸದ ಡಿ.ಕೆ ಸುರೇಶ್, 51 ಕೋಟಿ ಸಾಲ ಮಾಡಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೇ ಸಾಲ ಕೊಟ್ಟಿದ್ದಾರೆ. ಅದೇ ರೀತಿ ಪಡೆದಿದ್ದಾರೆ. ಈ ಬಗ್ಗೆ ಇಡಿ ಅಧಿಕಾರಿಗಳು ಸುಧೀರ್ಘ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ.
ಡಿಕೆ ಶಿವಕುಮಾರ್ ಅವರಿಂದ ಮತ್ತಷ್ಟು ಮಾಹಿತಿಯನ್ನು ಹೊರ ತೆಗೆಯಬೇಕು ಹೀಗಾಗಿ 2 ದಿನ ವಿಚಾರಣೆಗೆ ಅವಕಾಶ ಕೊಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ರು. ಇಡಿ ವಿಶೇಷ ಕೋರ್ಟ್ ಅಧಿಕಾರಿಗಳ ಮನವಿಗೆ ಅಸ್ತು ಎಂದಿತ್ತು. ಹೀಗಾಗಿ ಇಂದು ಮತ್ತು ನಾಳೆ ಜೈಲಿನಲ್ಲೇ ಡಿಕೆಶಿ ವಿಚಾರಣೆ ಎದುರಿಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ 3 ಗಂಟೆವರೆಗೆ ಡಿಕೆಶಿ ವಿಚಾರಣೆಗೆ ಕೋರ್ಟ್ ಅವಕಾಶ ನೀಡಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ ಸುರೇಶ್ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿರುವ ಇಡಿ, ಅವರಿಬ್ಬರ ಹೇಳಿಕೆ ಆಧಾರದಲ್ಲಿ ಡಿಕೆಶಿಗೆ ಪ್ರಶ್ನೆಗಳ ಸುರಿಮಳೆಗೈಯಲಿದೆ. ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಸಿಬಿಐ ಜೊತೆಗೆ ಮಹತ್ವದ ದಾಖಲೆಗಳನ್ನು ಹಂಚಿಕೊಂಡಿದ್ದು. ಪ್ರಾಥಮಿಕ ತನಿಖೆ ನಡೆಸಿ ಎಫ್‍ಐಆರ್ ಹಾಕಲು ಸಿಬಿಐ ನಿರ್ಧರಿಸಿದೆ.