ತನಿಖೆ ಪ್ರಾಥಮಿಕ ಹಂತದಲ್ಲಿದೆ, ಜಾಮೀನು ನೀಡಬೇಡಿ – ಇಡಿಯಿಂದ ಆಕ್ಷೇಪಣೆ ಸಲ್ಲಿಕೆ

Public TV
2 Min Read

ನವದೆಹಲಿ: ಸೆ.3 ರಂದು ಜಾರಿ ನಿರ್ದೇಶನಾಲಯದಿಂದ(ಇಡಿ) ಬಂಧನಕ್ಕೊಳಗಾಗಿ ಈಗ ಕಸ್ಟಡಿಯಲ್ಲಿರುವ ಮಾಜಿ ಸಚಿವ, ಶಾಸಕ ಡಿಕೆ ಶಿವಕುಮಾರ್ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.

ನವದೆಹಲಿಯ ರೋಸ್ ಅವೆನ್ಯೂನಲ್ಲಿರುವ ಇಡಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಜಾಮೀನು ನೀಡದಂತೆ ಇಡಿ ಆಕ್ಷೇಪಣೆ ಸಲ್ಲಿಕೆ ಮಾಡಿದೆ. ಸೆ.13 ರಂದು ನಾವು 4 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದೇವು. ನಮ್ಮ ಕಸ್ಟಡಿಗೆ ನೀಡಿದ್ದರೂ ನಾವು ಯಾವುದೇ ವಿಚಾರಣೆ ನಡೆಸಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ಇಡಿ ಆಕ್ಷೇಣೆ ಸಲ್ಲಿಸಿದೆ.

ಆಕ್ಷೇಪಣೆಯಲ್ಲಿ ಏನಿದೆ?
ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಚಾರಣೆ ಅಗತ್ಯವಿದ್ದು, ಆರೋಪಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯೂ ಇದ್ದು, ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿದ್ದು ಜಾಮೀನು ನೀಡುವುದು ಸರಿಯಲ್ಲ. ಇಡಿ ಸಂಸ್ಥೆಯೂ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ವ್ಯಕ್ತಿಗಳ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ಭಾರೀ ಪ್ರಮಾಣದ ಹಣ ಬಳಕೆಯಾಗಿದೆ ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಒಂದೊಮ್ಮೆ ಜಾಮೀನು ನೀಡಿದರೆ ಪ್ರಕರಣದ ಪ್ರಮುಖ ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆಯಿದೆ.

ಆರೋಪಿಗೆ ನಿರಂತರ ವೈದ್ಯಕೀಯ ಪರೀಕ್ಷೆಯಿಂದ ವೈದ್ಯಕೀಯ ಸಮಸ್ಯೆಗಳು ಇರುವುದು ಕಂಡುಬಂದಿಲ್ಲ. ಜೈಲಿನಲ್ಲೂ ಡಿಕೆಶಿ ವೈದ್ಯಕೀಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ಸಾಧ್ಯವಿದೆ. ಜಾಮೀನು ನೀಡುವುದರಿಂದ ದೊಡ್ಡ ಮತ್ತು ಬಹುಹಂತದ ಷಡ್ಯಂತ್ರವನ್ನು ಬಯಲಿಗೆಳೆಯಲು ತೊಂದರೆ ಉಂಟಾಗುತ್ತದೆ. ಅಲ್ಲದೇ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದಿದ್ದಾರೆ.

ಇಡಿ ಅಧಿಕಾರಿಗಳು ಕೋರ್ಟಿಗೆ ಆಕ್ಷೇಪಣೆ ಸಲ್ಲಿಕೆ ಮಾಡುತ್ತಿದಂತೆ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರು ಅಭಿಷೇಕ್ ಮನು ಸಿಂಘ್ವಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಡಿಕೆಶಿ ಪರ ವಕೀಲರ ವಾದ ಹೇಗಿರಬಹುದು?
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಆರೋಗ್ಯ ಸಮಸ್ಯೆ ಮುಂದಿಟ್ಟುಕೊಂಡು ಜಾಮೀನು ನೀಡುವಂತೆ ಮನವಿ ಮಾಡಬಹುದು. ಆರೋಗ್ಯ ಸುಧಾರಿಸಿದ ಬಳಿಕ ವಿಚಾರಣೆಗೆ ಹಾಜರಾಗುತ್ತೇವೆ. ಇಲ್ಲಿಯವರೆಗೆ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ದಿನದಿಂದ ಆಸ್ಪತ್ರೆಗೆ ದಾಖಲಾಗಿದ್ದೇವೆ. ಆರೋಗ್ಯ ದೃಷ್ಟಿಯಿಂದ ಜಾಮೀನು ನೀಡಬೇಕು ಎಂದು ಕೋರ್ಟಿನಲ್ಲಿ ವಾದ ಮಂಡಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *