ಸುಲಭ ವಹಿವಾಟಿನಲ್ಲಿ ಭಾರತದ ಲಾಂಗ್ ಜಂಪ್ – 14 ಸ್ಥಾನ ಏರಿಕೆ

Public TV
1 Min Read

ನವದೆಹಲಿ: ಉದ್ಯಮ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಿ ನಿರ್ವಹಿಸಲು ನೆರವಾಗುವ ವಿಷಯದಲ್ಲಿ ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ  14 ಸ್ಥಾನ ಏರಿಕೆಯಾಗಿ 63ನೇ ಸ್ಥಾನಕ್ಕೆ ಭಾರತ ಜಿಗಿದಿದೆ.

ಉದ್ದಿಮೆ ವಹಿವಾಟು ಆರಂಭಿಸಲು ಅನುಕೂಲತೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಹಲವಾರು ಮಾನದಂಡಗಳನ್ನು ಆಧರಿಸಿ ವಿಶ್ವಬ್ಯಾಂಕ್ 190 ದೇಶಗಳ ಆರ್ಥಿಕತೆಗಳನ್ನು ಲೆಕ್ಕಹಾಕಿ ಪ್ರತಿವರ್ಷ ಶ್ರೇಯಾಂಕ ಪಟ್ಟಿಯನ್ನು ನೀಡುತ್ತದೆ. ಈ ಪಟ್ಟಿಯಲ್ಲಿ 2018ರಲ್ಲಿ ಭಾರತಕ್ಕೆ 77ನೇ ಸ್ಥಾನ ಸಿಕ್ಕಿತ್ತು.

ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಬಂಡವಾಳ ಹೂಡಲು ವಿವಿಧ ಕಂಪನಿಗಳು ಆಸಕ್ತಿ ತೋರಿಸಿದ ಹಿನ್ನೆಲೆಯಲ್ಲಿ ಈ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನ ಜಿಗಿದಿದೆ. 2015ರಲ್ಲಿ ಭಾರತಕ್ಕೆ 130ನೇ ಸ್ಥಾನ ಸಿಕ್ಕಿತ್ತು. 2016ರಲ್ಲೂ ಭಾರತದ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್‍ಗಳು ಭಾರತದ ಜಿಡಿಪಿ ದರವನ್ನು ಇಳಿಕೆ ಮಾಡಿದ್ದರಿಂದ ಟೀಕೆಗೆ ಗುರಿಯಾಗಿದ್ದ ಮೋದಿ ಸರ್ಕಾರಕ್ಕೆ ವಿಶ್ವಬ್ಯಾಂಕಿನ ಈ ವರದಿಯಿಂದಾಗಿ ಸ್ವಲ್ಪ ರಿಲೀಫ್ ಸಿಕ್ಕಿದೆ.

2005ರಲ್ಲಿ ಭಾರತಕ್ಕೆ 116 ಸ್ಥಾನ ಸಿಕ್ಕಿದರೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 2014ರಲ್ಲಿ 142 ಸ್ಥಾನ ಸಿಕ್ಕಿತ್ತು. ಕಳೆದ 5 ವರ್ಷಗಳಲ್ಲಿ ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ 79 ಸ್ಥಾನ ಏರಿಕೆಯಾಗಿದೆ.

ಭಾರತದ ಜೊತೆ ಸೌದಿ ಅರೇಬಿಯಾ(62), ಜೋರ್ಡಾನ್(75), ಟೊಗೊ(97), ಬಹರೇನ್(43), ತಜಕಿಸ್ತಾನ(106), ಪಾಕಿಸ್ತಾನ(108), ಕುವೈತ್(83), ಚೀನಾ(31), ನೈಜಿರಿಯಾ(131) 10 ಸ್ಥಾನಗಳ ಏರಿಕೆ ಕಂಡಿದೆ.

ನ್ಯೂಜಿಲೆಂಡ್, ಸಿಂಗಾಪೂರ್, ಹಾಂಕಾಂಗ್, ಡೆನ್ಮಾರ್ಕ್, ದಕ್ಷಿಣ ಕೊರಿಯ, ಅಮೆರಿಕ, ಜಾರ್ಜಿಯಾ, ಇಂಗ್ಲೆಂಡ್, ನಾರ್ವೆ, ಸ್ವಿಡನ್ ಕ್ರಮವಾಗಿ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳನ್ನು ಪಡೆದಿದೆ.

ಯಾವ ವರ್ಷ ಎಷ್ಟನೇ ಶ್ರೇಯಾಂಕ?
116(2005), 134(2006), 120(2007), 122(2008), 133(2009), 134(2010), 132(2011), 132(2012), 134(2013), 142(2014), 130(2015), 130(2016), 100(2017) 77(2018) 63(2019).

Share This Article
Leave a Comment

Leave a Reply

Your email address will not be published. Required fields are marked *