ಬೆಂಗಳೂರು: ಪಾದರಾಯನಪುರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡಲು ಬಿಬಿಎಂಪಿ ಹೊಸ ಆಪರೇಷನ್‍ಗೆ ಪ್ಲಾನ್ ಮಾಡಿಕೊಂಡಿದೆ.
ಪಾದಾರಾಯನಪುರದಲ್ಲಿ ಒಂದಲ್ಲ ಎರಡಲ್ಲ 42 ಪ್ರಕರಣಗಳಿದ್ದು, ಜನರು ಭಯಭೀತರಾಗಿದ್ದಾರೆ. ಇದರಿಂದ ಪಾದಾರಾಯನಪುರದಲ್ಲಿ ಕೊರೊನಾ ಕಟ್ಟಿಹಾಕಲೇಬೇಕು ಅಂತ ಆಪರೇಷನ್ ಪಾದರಾಯನಪುರದ ಬ್ಲೂಪ್ರಿಂಟ್ ಅನ್ನು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ರೆಡಿ ಮಾಡಿದೆ.
ಪಾದರಾಯನಪುರದಲ್ಲಿರುವ 44 ಪ್ರಕರಣಗಳಲ್ಲಿ 24 ಪ್ರಕರಣ ತಬ್ಲಿಘಿಗಳಿಂದ ಹರಡಿದೆ. ಜೊತೆಗೆ ಸೀಲ್‍ಡೌನ್, ಕ್ವಾರಂಟೈನ್ ಮಾಡಿದ್ದ ರಸ್ತೆಯಲ್ಲಿ ಸಂಚಾರ ಮಾಡಿದವರಿಗೂ ಪಾಸಿಟಿವ್ ಬಂದಿದೆ. ಇದು ಮತ್ತೆ ಅತಿರೇಕಕ್ಕೆ ಹೋಗಬಾರದು, ಸಮುದಾಯಕ್ಕೆ ಬರಬಾರದು ಅಂತ ಬಿಬಿಎಂಪಿ ಅಧಿಕಾರಿಗಳು ಶನಿವಾರ ಸಭೆ ನಡೆಸಿದ್ದಾರೆ. ಅಲ್ಲದೇ ಕೊರೊನಾ ಕಂಟ್ರೋಲ್‍ಗೆ ಒಂದಿಷ್ಟು ಸೂತ್ರವನ್ನು ತಯಾರು ಮಾಡಿದ್ದಾರೆ.
ಆಪರೇಷನ್ ಪಾದಾರಾಯನಪುರ:
ಸೋಮವಾರ ಅಥವಾ ಮಂಗಳವಾರದಿಂದ ಆಪರೇಷನ್ ಪಾದಾರಾಯನಪುರವನ್ನು ಬಿಬಿಎಂಪಿ ಶುರು ಮಾಡಲಿದೆ. ಪಾದರಾಯನಪುರದ ಎಲ್ಲಾ ನಿವಾಸಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ. ಪ್ರತಿ ಮನೆಗೆ ಹೋಗಿ ಸರ್ವೇ ನಡೆಸಿ, ಎಲ್ಲರ ಪರೀಕ್ಷೆಗೆ ಮಾಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ವಯಸ್ಸಾದವರು, ಗರ್ಭಿಣಿಯರು, ಮಕ್ಕಳ ಟೆಸ್ಟ್ ಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಜೆಜೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲ್ಯಾಬ್ ಆರಂಭಿಸಲು ಚಿಂತನೆ ಮಾಡಲಾಗಿದೆ. ಇನ್ನೂ ನಾಪತ್ತೆಯಾದ ತಬ್ಲಿಘಿಗಳು, ಅವರ ಸಂಪರ್ಕಿತರಿಗಾಗಿ ಹುಡುಕಾಟ ಮಾಡಲಾಗುತ್ತದೆ.
ಸದ್ಯಕ್ಕೆ ಬಿಬಿಎಂಪಿ ಅಧಿಕಾರಿಗಳು ಈ ರೀತಿಯ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಇಡೀ ಪಾದರಾಯನಪುರದ ಜನರ ಟೆಸ್ಟ್ ಗೆ ಬಿಬಿಎಂಪಿ ಮುಂದಾಗಿದ್ದು, ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಿಬಿಎಂಪಿ ಪ್ರಯತ್ನಿಸುತ್ತಿದೆ.