ಅವಕಾಶ ಕೇಳಿ ಬಂದಿದ್ದ ಶೈಲಜಾ ಜೊತೆ 2ನೇ ಮದುವೆಯಾದರು ದ್ವಾರಕೀಶ್

Public TV
1 Min Read

ದ್ವಾರಕೀಶ್ (Dwarakish) ಅವರಿಗೆ ಎರಡು ಮದುವೆ ಆಗಿರೋ ವಿಚಾರ ತುಂಬಾ ಜನರಿಗೆ ಗೊತ್ತಿರಲಿಲ್ಲ. ಜೀ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂಥದ್ದೊಂದು ವಿಚಾರವನ್ನು ಸ್ವತಃ ದ್ವಾರಕೀಶ್ ಹೇಳಿಕೊಂಡಿದ್ದರು. ಆನಂತರ ಮದುವೆ ಆಗಿದ್ದ ಶೈಲಜಾ (Shailaja) ಅವರೇ ಒಂದಷ್ಟು ವಿಷಯಗಳನ್ನು ಜನರ ಮುಂದಿಟ್ಟಿದ್ದರು.

ದ್ವಾರಕೀಶ್ ಎರಡನೇ ಮದುವೆ ಆದಾಗ ಅವರಿಗೆ 51 ವರ್ಷ. ಈ ಸಮಯದಲ್ಲಿ ದ್ವಾರಕೀಶ್ ಗೌರಿ ಕಲ್ಯಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಇವರದ್ದೇ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ ಶ್ರುತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದಾಗ, ಆ ಸಿನಿಮಾದಲ್ಲಿ ತನ್ನ ತಂಗಿಗೆ ಅವಕಾಶ ಕೇಳಲು ಬಂದವರು ಶೈಲಜಾ. ಈ ಭೇಟಿಯೇ ಮುಂದೆ ಪ್ರೀತಿಯಾಗಿ, ಮದುವೆ ಹಂತ ತಲುಪಿತ್ತು.

ಹಾಗಂತ ಶೈಲಜಾ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದೋರು ಅಲ್ಲ. ಅವರು ಬ್ಯಾಂಕ್ ಉದ್ಯೋಗಿ. ಪ್ರತಿಷ್ಠಿಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಂಗಿಗಾಗಿ ಪಾತ್ರ ಕೇಳಲು ಬಂದವರು ದ್ವಾರಕೀಶ್ ಅವರ ಪ್ರೀತಿಗೆ ಮನಸೋತರು. ಎರಡನೇ ಮದುವೆ ಅಂತ ಗೊತ್ತಿದ್ದರೂ, ಒಪ್ಪಿಕೊಂಡರು.

 

ಶೈಲಜಾ ಹಾಗೂ ದ್ವಾರಕೀಶ್ ಇಷ್ಟ ಪಡುತ್ತಿರುವ ಮತ್ತು ದ್ವಾರಕೀಶ್ ಮತ್ತೊಂದು ಮದುವೆ ಆಗುವ ವಿಚಾರವನ್ನು ಮೊದಲ ಪತ್ನಿಗೆ (Ambuja) ತಿಳಿಸೋದು ಹೇಗೆ ಎನ್ನುವ ಒದ್ದಾಟ ಇಬ್ಬರದ್ದೂ ಆಗಿತ್ತು. ಆಗಲೇ ದ್ವಾರಕೀಶ್ ಅವರಿಗೆ ಐದು ಮಕ್ಕಳು. ಅಳುಕಿನಿಂದಲೇ ಮೊದಲ ಪತ್ನಿಗೆ ವಿಷಯ ತಿಳಿಸಿದ್ದರು ದ್ವಾರಕೀಶ್. ಆಗ ಮೊದಲ ಪತ್ನಿ ಹೇಳಿದ ಮಾತೆಂದರೆ, ನಿನಗೇನಿಷ್ಟನೋ ಅದು ನನಗಿಷ್ಟ ದ್ವಾರ್ಕಿ ಅಂತ.. ಆಗ ಮದುವೆ ಸಲೀಸಾಗಿ ನಡೆಯಿತು. ಪತ್ನಿ ಮತ್ತು ಮಕ್ಕಳ ಎದುರೇ ಎರಡನೇ ಮದುವೆ ಆಗಿದ್ದರು ದ್ವಾರಕೀಶ್.

Share This Article