ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಡಿವಿಎಸ್ ಸ್ಪಷ್ಟನೆ

Public TV
2 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯ (Loksabha Elections 2024) ಟಿಕೆಟ್ ಕೈ ತಪ್ಪಿದೆ. ಈ ಬೆನ್ನಲ್ಲೇ ತಮ್ಮ ವಿರುದ್ಧ ಹರಿದಾಡುತ್ತಿರುವ ಊಹಾಪೋಹಗಳಿಗೆ ಸ್ವತಃ ಅವರೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ತಮ್ಮ ಎಕ್ಸ್ ಖಾತೆಯ ಮೂಲಕ ಸ್ಪಷ್ಟನೆ ನೀಡಿರುವ ಡಿವಿಎಸ್, ನಾನು ಕಾಂಗ್ರೆಸ್ ಪಕ್ಷಕ್ಕೆ (Congress) ಸೇರುವುದಾಗಿ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಹಾರಿಕೆ ಸುದ್ದಿಯನ್ನು ಹಬ್ಬುವವರು ದೇಶದ್ರೋಹಿಗಳು ಅಂತಾ ಕಿಡಿಕಾರಿದ್ದಾರೆ.

ಲೋಕಸಭಾ ಟಿಕೆಟ್ ಸಿಗದ್ದಕ್ಕೆ ಡಿವಿ ಸದಾನಂದ ಗೌಡರು (Sadananda Gowda) ಕಾಂಗ್ರೆಸ್ ಸೇರುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಲು ಆರಂಭವಾಗಿದೆ. ಆದರೆ ಇದೀಗ ಡಿವಿಎಸ್ ಅವರೇ ಸ್ಪಷ್ಟನೆ ಕೊಡುವ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಬದಲಾಯಿಸಲು ಆಗಲ್ಲ: ಸ್ವಪಕ್ಷದ ನಾಯಕನ ವಿರುದ್ಧ ರಾಜೂಗೌಡ ಆಕ್ರೋಶ

ಕಳೆದ ಚುನಾವಣೆಯಲ್ಲಿ ಗೆದ್ದಿದ್ದ 25 ಸಂಸದರಲ್ಲಿ ಕೆಲವು ಸಂಸದರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಲಾಗಿತ್ತು. ಇದರಲ್ಲಿ ಸದಾನಂದ ಗೌಡರ ಹೆಸರೂ ಕೇಳಲ್ಪಟ್ಟಿತ್ತು. ಅದು ನಿಜವೂ ಆಗಿದೆ. ಬಿಜೆಪಿ 2ನೇ ಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಎಕ್ಸ್ ಮೂಲಕ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ. ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ ಎಂದು ಹೇಳಿದ್ದರು.

ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು ಎಂದು ಹೇಳುವ ಮೂಲಕ ಟಿಕೆಟ್ ಕೈ ತಪ್ಪುವ ಸುಳಿವು ನೀಡಿದ್ದರು.

Share This Article