ಸೂಲಿಬೆಲೆ, ಡಿವಿಎಸ್ ಟ್ವೀಟ್ ವಾರ್ ರಿಪೋರ್ಟ್ ಪಡೆದ ಅಮಿತ್ ಶಾ

Public TV
3 Min Read

– ಕೇಂದ್ರ ಸಚಿವರಿಗೆ ಶಾ ಕ್ಲಾಸ್

ನವದೆಹಲಿ: ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ನಡುವಿನ ವಾಕ್ ಸಮರ ಭಾರೀ ಸದ್ದು ಮಾಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೂಲಿಬೆಲೆ ಹಾಗೂ ಸದಾನಂದಗೌಡ ಅವರ ಟ್ವಿಟ್ಟರ್ ವಾರ್‍ನ ಸಂಪೂರ್ಣ ರಿಪೋರ್ಟ್ ಅನ್ನು ತರಿಸಿಕೊಂಡಿದ್ದಾರೆ. ಕನ್ನಡದಲ್ಲಿರುವ ಟ್ವೀಟ್‍ಗಳನ್ನು ಭಾಷಾಂತರ ಮಾಡಿಸಿ ಪ್ರತಿ ಪದದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ – ಸೂಲಿಬೆಲೆಗೆ ಸಿಂಹ ಟಾಂಗ್

ಹಿರಿಯರಾಗಿ ಒಂದು ವಿಚಾರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದೀರಿ. ನಿಮ್ಮ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಅಮಿತ್ ಶಾ, ಸದಾನಂದಗೌಡ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಆಗಿದ್ದೇನು?:
ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ ಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಬೇಕಾದ ತಕ್ಷಣ ಪರಿಹಾರ, ಮಧ್ಯಂತರ ಪರಿಹಾರ ಮತ್ತು ದೀರ್ಘಕಾಲೀನ ಪರಿಹಾರದ ಬಗ್ಗೆ ಬೇಕಾದ ವರದಿಗಳನ್ನು ತಯಾರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.

ಇದನ್ನು ರಿಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ, ಲಾಲ್! ಇವರು ಈಗ ಬಂದರು.. ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾಷ್ಟ್ರ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೆ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ ಎಂದು ಡಿ.ವಿ ಸದಾನಂದಗೌಡರನ್ನು ಪ್ರಶ್ನಿಸಿದ್ದರು.

ಈ ವಿಚಾರವಾಗಿ ಬೆಂಗಳೂರಿನಲ್ಲಿ ಬುಧವಾರ ಅಸಮಾಧಾನ ಹೊರ ಹಾಕಿದ್ದ ಕೇಂದ್ರ ಸಚಿವರು, ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‍ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‍ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಪರಸ್ಪರ ವಾಕ್ ಹಾಗೂ ಟ್ವೀಟ್ ಸಮರದ ಬೆನ್ನಲ್ಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿದ್ದರು. ಕೇಂದ್ರ ಸಚಿವರು ಬ್ಲಾಕ್ ಮಾಡಿರುವುದನ್ನು ಸ್ಕ್ರೀನ್ ಶಾರ್ಟ್ ತೆಗೆದು ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ಅವರು, ನಿಮಗೆ ಧನ್ಯವಾದ (ಥ್ಯಾಂಕ್ ಯೂ) ಎಂದು ಬರೆದುಕೊಂಡಿದ್ದರು. ಕೇಂದ್ರ ಸಚಿವರ ನಡೆಯ ಬಗ್ಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವರು, ನಾನು ಯಾಕೆ ಬ್ಲಾಕ್ ಮಾಡಬೇಕು? ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಆದರೆ ಅದಕ್ಕೊಂದು ಮಾರ್ಗವಿದೆ. ಬುಧವಾರ 3-4 ಗಂಟೆ ಟ್ವಿಟ್ಟರ್ ಸ್ಥಗಿತಗೊಂಡಿತ್ತು. ಈ ವೇಳೆ ಬ್ಲಾಕ್ ಆಗಿರಬಹುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಡಿವಿಎಸ್ ಹೇಳಿಕೆಯ ಬೆನ್ನಲ್ಲೇ ಸೂಲಿಬೆಲೆ ಅಭಿಮಾನಿಗಳು ಸದಾನಂದಗೌಡರೇ, ಸಂಸದರನ್ನು ಪ್ರಶ್ನಿಸುವುದು ದೇಶದ್ರೋಹವಾದರೇ ನಾನು ದೇಶದ್ರೋಹಿಯೇ ಎಂದು ಬರೆದು #StopUrArroganceDVS #IamWithChakravarthySulibele #NotFairModiji  ಬಳಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *