ಸಲಿಂಗಿ ಜೊತೆ ಮದ್ವೆ ಆಗುವಂತೆ ದ್ಯುತಿ ಚಂದ್‍ಗೆ ಬ್ಲ್ಯಾಕ್​ಮೇಲ್: ಸರಸ್ವತಿ ಚಂದ್

Public TV
2 Min Read

ನವದೆಹಲಿ: ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ಭಾನುವಾರ ತಾವು ಸಲಿಂಗಿ ಸಂಬಂಧದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು. ಇದೀಗ ದ್ಯುತಿ ಹಿರಿಯ ಸೋದರಿ ಸರಸ್ವತಿ ಚಂದ್, ಆಕೆಗೆ ಸಲಿಂಗಿ ಜೊತೆ ಮದುವೆ ಆಗುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪರಿಣಾಮ ಈ ರೀತಿಯ ಹೇಳಿಕೆ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಏಷ್ಯನ್ ಗೇಮ್ಸ್ ಪದಕ ವಿಜೇತೆಯಾಗಿರುವ ಸರಸ್ವತಿ ಚಂದ್, ಸೋದರಿಯ ಮಾತು ಕೇಳಿ ತುಂಬಾ ದುಃಖವಾಗಿದೆ. ಮತ್ತೊಬ್ಬ ಮಹಿಳೆಯೊಂದಿಗೆ ಮದುವೆ ಆಗುವಂತೆ ದ್ಯುತಿ ಮೇಲೆ ಒತ್ತಡ ಹಾಕುವ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಒಂದು ವೇಳೆ ಸಲಿಂಗಿಯೊಂದಿಗೆ ವಿವಾಹ ಆಗದೇ ಇದ್ದರೆ ಆಕೆಯ ಆಸ್ತಿಯನ್ನು ನಮ್ಮದಾಗಿಸಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಆಟದತ್ತ ಆಕೆಯ ಗಮನವನ್ನು ಬೇರೆಡೆ ಸೆಳೆದು ಕ್ರೀಡೆಯಿಂದ ಹೊರ ಹಾಕುವ ಷಡ್ಯಂತ್ರ ರಚಿಸಲಾಗಿದೆ ಎಂದು ಆರೋಪಿಸಿದರು.

ದ್ಯುತಿ ಜೀವನ ಆಪತ್ತಿನಲ್ಲಿದೆ. ಆಕೆಯ ಹಣ ಮತ್ತು ಆಸ್ತಿಯನ್ನು ಸಾಧ್ವೀನ ಪಡೆದುಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ದ್ಯುತಿ ಚಂದ್‍ಗೆ ಭದ್ರತೆಯನ್ನು ನೀಡಬೇಕೆಂದು ಸರಸ್ವತಿ ಚಂದ್ ಮನವಿ ಮಾಡಿಕೊಂಡಿದ್ದಾರೆ.

ದ್ಯುತಿ ಚಂದ್ ಹೇಳಿದ್ದೇನು?
ನಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ಜೀವಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಸಲಿಂಗಿಯಾಗಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ನಾನು ಮುಂದಿರುತ್ತೇನೆ. ಇದು ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಸದ್ಯ ನಾನು ವಿಶ್ವ ಚಾಂಪಿಯನ್‍ಶಿಪ್ ಹಾಗೂ ಒಲಿಂಪಿಕ್ಸ್ ಕಡೆ ನನ್ನ ಹೆಚ್ಚಿನ ಗಮನ ಇದ್ದು, ಮುಂದಿನ ದಿನಗಳಲ್ಲಿ ನಾನು ಆಕೆಯೊಂದಿಗೆ ಜೀವಿಸಲು ಇಷ್ಟ ಪಡುತ್ತೇನೆ ಎಂದು ದ್ಯುತಿ ಚಂದ್ ಹೇಳಿಕೊಂಡಿದ್ದರು.

ಪ್ರೀತಿಯನ್ನು ತಪ್ಪು ಎನ್ನಲು ಯಾರಿಗೂ ಹಕ್ಕಿಲ್ಲ, ಇದನ್ನೇ ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಅಥ್ಲೀಟ್ ಆದ ಕಾರಣಕ್ಕೆ ನನಗೆ ಮಾತ್ರ ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 5 ವರ್ಷಗಳ ಕಾಲ ನಾನು ಓಟದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದು, ವೃತ್ತಿ ಜೀವನದಿಂದ ವಿರಾಮ ಪಡೆದ ಬಳಿಕ ನನ್ನ ಜೀವನವನ್ನು ಗೆಳತಿಯೊಂದಿಗೆ ಕಳೆಯುತ್ತೇನೆ ಎಂದಿದ್ದಾರೆ.

2018ರ ಏಷ್ಯನ್ ಗೇಮ್ಸ್ ನಲ್ಲಿ 100 ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ಯುತಿ ಚಂದ್ ಬೆಳ್ಳಿ ಪದಕವನ್ನು ಪಡೆದಿದ್ದರು. 20 ವರ್ಷಗಳ ಇತಿಹಾಸಲ್ಲಿ ಮೊದಲ ಬಾರಿಗೆ ಭಾರತ ಮಹಿಳಾ ಆಥ್ಲಿಟ್ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. 16 ವರ್ಷಗಳ ಬಳಿಕ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಲಭಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *